×
Ad

Ballari | ಪಿಂಚಣಿ ವ್ಯವಸ್ಥೆ ಶೀಘ್ರ ಡಿಜಿಟಲೀಕರಣ: ಸಚಿನ್ ಕೃಷ್ಣ ಕೌಶಿಕ್

Update: 2026-05-16 19:25 IST

ಬಳ್ಳಾರಿ: ಪಿಂಚಣಿ ವ್ಯವಸ್ಥೆಯ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಲು ಸಿದ್ಧತೆ ನಡೆಸಲಾಗುತ್ತಿದ್ದು, ಶೀಘ್ರದಲ್ಲೇ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಸಚಿನ್ ಕೃಷ್ಣ ಕೌಶಿಕ್ ಹೇಳಿದರು.

ನಗರದ ತಾಲೂಕು ಆಡಳಿತ ಭವನದ ಸಭಾಂಗಣದಲ್ಲಿ ಅಕೌಂಟೆಂಟ್ ಜನರಲ್ ಕಚೇರಿ, ಖಜಾನೆ ಇಲಾಖೆ ಹಾಗೂ ಖಜಾನೆ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಪಿಂಚಣಿ ಅದಾಲತ್, ಸಾಮಾನ್ಯ ಭವಿಷ್ಯ ನಿಧಿ ಅದಾಲತ್ ಹಾಗೂ ಲೆಕ್ಕಪತ್ರ ಸಮಸ್ಯೆಗಳ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಿವೃತ್ತ ಸರ್ಕಾರಿ ನೌಕರರು ಪಿಂಚಣಿ ಸೌಲಭ್ಯಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆಯುವುದನ್ನು ತಪ್ಪಿಸಲು ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಹಿಂದೆ ಪಿಂಚಣಿ ಮಂಜೂರಾತಿಗೆ ಹೆಚ್ಚು ಸಮಯ ಬೇಕಾಗುತ್ತಿತ್ತು. ಆದರೆ ಕಳೆದ ಐದು-ಆರು ತಿಂಗಳಿಂದ ಪ್ರಕ್ರಿಯೆ ವೇಗಗೊಳಿಸಲಾಗಿದ್ದು, ಗರಿಷ್ಠ 30 ರಿಂದ 45 ದಿನಗಳೊಳಗೆ ಇತ್ಯರ್ಥಗೊಳಿಸಲು ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದರು.

ಏಪ್ರಿಲ್ 1ರ ವೇಳೆಗೆ ಕೇವಲ 15 ಮೂಲ ಪ್ರಕರಣಗಳು ಹಾಗೂ 221 ವಿಭಾಗೀಯ ಪ್ರಕರಣಗಳು ಬಾಕಿ ಇದ್ದವು. ಏಪ್ರಿಲ್ 25ರ ವೇಳೆಗೆ ಸುಮಾರು 9,000 ಹೊಸ ಪ್ರಕರಣಗಳು ಬಂದಿದ್ದರೂ, ಕಳೆದ ಒಂದು ತಿಂಗಳಲ್ಲಿ ಒಟ್ಟು 30,000 ಪಿಂಚಣಿ ಪ್ರಕರಣಗಳನ್ನು ಯಶಸ್ವಿಯಾಗಿ ಇತ್ಯರ್ಥಪಡಿಸಲಾಗಿದೆ ಎಂದು ಹೇಳಿದರು.

ಇಲಾಖೆಯಲ್ಲಿ ಶೇ.50 ಸಿಬ್ಬಂದಿ ಕೊರತೆ ಇದ್ದರೂ ಅಧಿಕಾರಿಗಳು ಹಾಗೂ ಸಿಬ್ಬಂದಿ ಶನಿವಾರ ಮತ್ತು ಭಾನುವಾರ ರಜೆ ದಿನಗಳಲ್ಲೂ ಕೆಲಸ ಮಾಡಿ ಬಾಕಿ ಪ್ರಕರಣಗಳನ್ನು ವಿಲೇವಾರಿ ಮಾಡಿದ್ದಾರೆ ಎಂದು ಹೇಳಿದರು.

ಮುಂದಿನ 2-3 ತಿಂಗಳಲ್ಲಿ ಸಂಪೂರ್ಣ ಡಿಜಿಟಲ್ ವ್ಯವಸ್ಥೆ ಜಾರಿಯಾಗಲಿದ್ದು, ಪಿಂಚಣಿದಾರರು ತಮ್ಮ ಪಿಪಿಒ ಅನ್ನು ಆನ್‌ಲೈನ್‌ನಲ್ಲೇ ಡೌನ್‌ಲೋಡ್ ಮಾಡಿಕೊಂಡು ಖಜಾನೆಗೆ ನೇರವಾಗಿ ಸಲ್ಲಿಸಬಹುದಾಗಿದೆ. ಇದರಿಂದ ಸ್ಪೀಡ್ ಪೋಸ್ಟ್ ವಿಳಂಬವೂ ತಪ್ಪಲಿದೆ ಎಂದು ವಿವರಿಸಿದರು.

ಈ ವೇಳೆ ಜಿಲ್ಲಾ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಮಲ್ಲೇಶಪ್ಪ ಮಾತನಾಡಿ, ಪಿಂಚಣಿ ಮಂಜೂರಾತಿಯಲ್ಲಿ ಆರು ತಿಂಗಳಿಂದ ಒಂದು ವರ್ಷದವರೆಗೆ ವಿಳಂಬವಾಗುತ್ತಿದೆ. ಅರ್ಜಿ ಸಲ್ಲಿಸಿದ 1ರಿಂದ 3 ತಿಂಗಳೊಳಗೆ ಪ್ರಕ್ರಿಯೆ ಪೂರ್ಣಗೊಳ್ಳಬೇಕು ಎಂದು ಆಗ್ರಹಿಸಿದರು.

ಬ್ಯಾಂಕ್‌ಗಳಲ್ಲಿ ವಯಸ್ಸಾದ ಪಿಂಚಣಿದಾರರು ಗಂಟೆಗಟ್ಟಲೆ ಕಾಯಬೇಕಾಗುತ್ತಿರುವುದರಿಂದ, ಪಿಂಚಣಿದಾರರಿಗಾಗಿ ಪ್ರತ್ಯೇಕ ಕೌಂಟರ್ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಯಶೋದಾ, ನಾಗಜ್ಯೋತಿ, ಶ್ರೀಕಾಂತ್ ಎಂ.ಜೆ., ಶೇಖರಪ್ಪ, ಪ್ರಭು ಹಾಗೂ ಟಿ. ಹೊನ್ನೂರಪ್ಪ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News