ಬಳ್ಳಾರಿ | ಮಹನೀಯರ ಜಯಂತಿಯನ್ನು ಅರ್ಥಪೂರ್ಣ ಆಚರಣೆಗೆ ನಿರ್ಧಾರ : ಮುಹಮ್ಮದ್ ಝುಬೇರ್ ಎನ್.
ಬಳ್ಳಾರಿ : ಜಿಲ್ಲಾ ಕೇಂದ್ರದಲ್ಲಿ ವಿವಿಧ ಮಹನೀಯರ ಜಯಂತಿ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ಜಿಲ್ಲಾಡಳಿತ ಎಲ್ಲಾ ರೀತಿಯ ಸಿದ್ಧತೆಗಳನ್ನು ಕೈಗೊಂಡಿದೆ ಎಂದು ಅಪರ ಜಿಲ್ಲಾಧಿಕಾರಿ ಮುಹಮ್ಮದ್ ಝುಬೇರ್ ಎನ್. ಅವರು ತಿಳಿಸಿದರು.
ನಗರದ ಹಳೆಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಅಧಿಕಾರಿಗಳು ಹಾಗೂ ಸಮುದಾಯದ ಮುಖಂಡರೊಂದಿಗೆ ಹಮ್ಮಿಕೊಳ್ಳಲಾಗಿದ್ದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಗರದ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಜ.19 ರಂದು ಮಹಾಯೋಗಿ ವೇಮನ ಜಯಂತಿ, ಜ.21 ರಂದು ಅಂಬಿಗರ ಚೌಡಯ್ಯ ಜಯಂತಿ ಹಾಗೂ ಜ.25 ರಂದು ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಹೇಳಿದರು.
ಶಿವಶರಣರು ಅಥವಾ ದಾರ್ಶನಿಕರು ಕೇವಲ ಒಂದು ಸಮುದಾಯಕ್ಕೆ ಸೀಮಿತವಲ್ಲ. ಅವರ ಜೀವನ ಹಾಗೂ ಚಿಂತನೆಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ನಮ್ಮ ಜವಾಬ್ದಾರಿ. ಸರ್ಕಾರದ ಆದೇಶದಂತೆ ಸಭೆ-ಸಮಾರಂಭಗಳಲ್ಲಿ ಹೂಗುಚ್ಛ ಅಥವಾ ಫಲಬುಟ್ಟಿ ನೀಡುವಂತಿಲ್ಲ, ಕೇವಲ ಪುಸ್ತಕ ನೀಡಲು ಮಾತ್ರ ಅವಕಾಶವಿದೆ," ಎಂದು ಎಡಿಸಿ ಸ್ಪಷ್ಟಪಡಿಸಿದರು.
ಕಟ್ಟುನಿಟ್ಟಿನ ಸೂಚನೆಗಳು:
ಬ್ಯಾನರ್ ಮತ್ತು ಡಿಜೆ: ಬ್ಯಾನರ್ ಅಳವಡಿಕೆಗೆ ಮಹಾನಗರ ಪಾಲಿಕೆಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಮೆರವಣಿಗೆಯಲ್ಲಿ ಡಿಜೆ ಅಥವಾ ಹೆಚ್ಚಿನ ಶಬ್ದದ ಧ್ವನಿವರ್ಧಕಗಳ ಬಳಕೆಗೆ ಅವಕಾಶವಿಲ್ಲ.
ಮೆರವಣಿಗೆ: ಸಾಂಸ್ಕೃತಿಕ ಕಲಾತಂಡಗಳೊಂದಿಗೆ ಮೆರವಣಿಗೆ ನಡೆಯಲಿದ್ದು, ಸಾರ್ವಜನಿಕರಿಗೆ ತೊಂದರೆಯಾಗದಂತೆ ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ವಹಿಸಬೇಕು.
ಉಪನ್ಯಾಸ: ಮಹನೀಯರ ಬದುಕಿನ ಕುರಿತು ಪರಿಣಿತರಿಂದ ವಿಶೇಷ ಉಪನ್ಯಾಸ ಹಮ್ಮಿಕೊಳ್ಳಬೇಕು.
ಸೌಕರ್ಯ: ಕಾರ್ಯಕ್ರಮದ ಸ್ಥಳದಲ್ಲಿ ಕುಡಿಯುವ ನೀರು ಹಾಗೂ ಸ್ವಚ್ಛತೆ ಕಾಪಾಡುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಲಾಯಿತು.
ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ, ಮಹಾನಗರ ಪಾಲಿಕೆ ಹಾಗೂ ಪೊಲೀಸ್ ಅಧಿಕಾರಿಗಳು, ಡಿಡಿಪಿಐ, ಡಿಡಿಪಿಯು ಮತ್ತು ವಿವಿಧ ಸಮಾಜದ ಮುಖಂಡರು ಉಪಸ್ಥಿತರಿದ್ದರು.