ಸಿರುಗುಪ್ಪ | ಬಿ.ಎಂ. ಸೂಗೂರು ಗ್ರಾಪಂ ನೂತನ ಅಧ್ಯಕ್ಷರಾಗಿ ಪೀರಮ್ಮ ಹೊನ್ನೂರು ಸಾಬ್ ಅವಿರೋಧ ಆಯ್ಕೆ
ಸಿರುಗುಪ್ಪ: ತಾಲ್ಲೂಕಿನ ಬಿ.ಎಂ. ಸೂಗೂರು ಗ್ರಾಮ ಪಂಚಾಯತಿಯ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪೀರಮ್ಮ ಹೊನ್ನೂರು ಸಾಬ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸ್ಥಳೀಯ ಶಾಸಕ ಬಿ.ಎಂ.ನಾಗರಾಜ್ ಅವರ ಆಪ್ತರು ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲ್ಲೂಕು ಅಧ್ಯಕ್ಷರಾದ ಎಂ.ಮಾರುತಿ ವರಪ್ರಸಾದ ರೆಡ್ಡಿ ಅವರ ನೇತೃತ್ವದಲ್ಲಿ, ಪೀರಮ್ಮ ಅವರು ನಾಮಪತ್ರ ಸಲ್ಲಿಸಿದ್ದರು. ಪಂಚಾಯಿತಿಯ ಸರ್ವ ಸದಸ್ಯರ ಒಮ್ಮತದ ಮೇರೆಗೆ ಇವರನ್ನು ನೂತನ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.ಚುನಾವಣಾ ಅಧಿಕಾರಿ ಪವನ್ ಕುಮಾರ್ ದಂಡಪ್ಪನವರ್ ಹಾಗೂ ಗ್ರಾಮ ಪಂಚಾಯತ್ ವಿಸ್ತರಣಾಧಿಕಾರಿ ವೀರನಗೌಡ ಅವರ ಸಮ್ಮುಖದಲ್ಲಿ ಈ ಪ್ರಕ್ರಿಯೆ ನಡೆಯಿತು. ಆಯ್ಕೆಯ ಬಳಿಕ ಚುನಾವಣಾ ಅಧಿಕಾರಿಗಳು ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.
ಇದೇ ವೇಳೆ ನೂತನ ಅಧ್ಯಕ್ಷೆ ಪೀರಮ್ಮ ಅವರು ಚುನಾವಣಾ ಅಧಿಕಾರಿಗಳು, ಪೊಲೀಸ್ ಇಲಾಖೆಯ ಎಎಸ್ಐ ವೆಂಕಟರಮಣ, ಸಿಬ್ಬಂದಿ ಚಿನ್ನಪ್ಪ ಹಾಗೂ ಕಾಂಗ್ರೆಸ್ ಪಕ್ಷದ ಪ್ರಮುಖರಾದ ಪಿ. ಹುಸೇನಪ್ಪ ನಾಯಕ, ಸಿ. ಗಿರೀಶ್ ಗೌಡ, ಸಿ. ಚೆನ್ನ ಬಸವರೆಡ್ಡಿ, ಸಿ.ಎಚ್. ಕೇಶಪ್ಪ ನಾಯಕ್ ಸೇರಿದಂತೆ ಅನೇಕ ಮುಖಂಡರನ್ನು ಗೌರವಿಸಿದರು.
ಕಾರ್ಯಕ್ರಮದ ನಂತರ ನೂತನ ಅಧ್ಯಕ್ಷರು ಗ್ರಾಮದ ದೇವಸ್ಥಾನಗಳಿಗೆ ಭೇಟಿ ನೀಡಿ ದರ್ಶನ ಪಡೆದರು. ಈ ಸಂಭ್ರಮಾಚರಣೆಯಲ್ಲಿ ಬಿ.ಎಂ. ಸೂಗೂರು, ಇಟಿಗೆಹಾಳು, ಅಲಬನೂರು, ನಾಗರಹಾಳು, ವೆಂಕಟಾಪುರ ಹಾಗೂ ನಾಡಂಗ ಗ್ರಾಮಗಳ ಮುಖಂಡರು, ಕಾರ್ಯಕರ್ತರು ಮತ್ತು ಪಂಚಾಯಿತಿಯ ಹಾಲಿ ಹಾಗೂ ಮಾಜಿ ಸದಸ್ಯರು ಉಪಸ್ಥಿತರಿದ್ದರು.