ಬಳ್ಳಾರಿ | ಮಾಧ್ಯಮಗಳು ಸಮಾಜ ಸುಧಾರಣೆಯ ಹಾದಿಯಲ್ಲಿ ಸಾಗಲಿ : ಮುಂಡರಗಿ ನಾಗರಾಜ
'ವಾರ್ತಾಲಾಪ' ಕಾರ್ಯಾಗಾರ
ಬಳ್ಳಾರಿ: ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಮಾಧ್ಯಮಗಳು ಕೇವಲ ಸುದ್ದಿ ನೀಡುವುದಕ್ಕೆ ಸೀಮಿತವಾಗದೆ, ಸಮಾಜವನ್ನು ಸುಧಾರಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಡಾ. ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ ಅವರು ಹೇಳಿದರು.
ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾ ಪಂಚಾಯಿತಿಯ ಹಳೆಯ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಕುರಿತು ಮಾಧ್ಯಮ ಪ್ರತಿನಿಧಿಗಳಿಗಾಗಿ ಶುಕ್ರವಾರ ಆಯೋಜಿಸಿದ್ದ 'ವಾರ್ತಾಲಾಪ' ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಯುವಜನತೆಯಲ್ಲಿ ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳ ಗೀಳು ವಿಪರೀತವಾಗುತ್ತಿದ್ದು, ಇದು ಅವರ ಆರೋಗ್ಯ ಮತ್ತು ಭವಿಷ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಯುವ ಸಮುದಾಯವನ್ನು ಸರಿದಾರಿಗೆ ತರುವಲ್ಲಿ ಮಾಧ್ಯಮಗಳ ಜವಾಬ್ದಾರಿ ದೊಡ್ಡದಿದೆ ಎಂದು ಅವರು ತಿಳಿಸಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ. ವೀರಭದ್ರಗೌಡ ಮಾತನಾಡಿ, ವಾರ್ತಾಲಾಪ ಕಾರ್ಯಾಗಾರವು ಸರ್ಕಾರಿ ಯೋಜನೆಗಳ ವಾಸ್ತವತೆ ಹಾಗೂ ಅಂಕಿ-ಅಂಶಗಳನ್ನು ತಿಳಿದುಕೊಳ್ಳಲು ಪತ್ರಕರ್ತರಿಗೆ ಇರುವ ಉತ್ತಮ ವೇದಿಕೆಯಾಗಿದೆ. ಅಂತರ್ಜಾಲದ ಮಾಹಿತಿಗಿಂತಲೂ ಅಧಿಕಾರಿಗಳೊಂದಿಗೆ ನೇರ ಸಂವಾದ ನಡೆಸಿ ನಿಖರ ಮಾಹಿತಿ ಪಡೆಯುವುದು ವರದಿಗಾರಿಕೆಗೆ ಸಹಕಾರಿ ಎಂದರು
ಈ ಸಂದರ್ಭದಲ್ಲಿ ಭಾರತ ಸರ್ಕಾರದ ವಾರ್ತಾ ಶಾಖೆಯ ಹೆಚ್ಚುವರಿ ಮಹಾನಿರ್ದೇಶಕ ಎಸ್.ಜಿ. ರವೀಂದ್ರ, ವಾರ್ತಾ ಸಹಾಯಕ ವಿ.ಸಿ. ಗುರುರಾಜ್ ಸೇರಿದಂತೆ ಜಿಲ್ಲೆಯ ಹಿರಿಯ ಪತ್ರಕರ್ತರು ಉಪಸ್ಥಿತರಿದ್ದರು.