×
Ad

ಬಳ್ಳಾರಿ| ಸ್ವಚ್ಛತಾ ನೌಕರರಿಗೆ ಸರಕಾರಿ ಆದೇಶದನ್ವಯ ವೇತನ ನೀಡಿ: ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಸಂಘ ಆಗ್ರಹ

Update: 2026-01-20 17:39 IST

ಬಳ್ಳಾರಿ : ಗ್ರಾಮ ಪಂಚಾಯಿತಿ ಸ್ವಚ್ಛ ವಾಹಿನಿ ಚಾಲಕರು ಮತ್ತು ಕಾರ್ಮಿಕರಿಗೆ ಸರಕಾರದ ಆದೇಶ ಮತ್ತು ನಿಯಮದನ್ವಯ ವೇತನವನ್ನು ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಸಂಘ ತಾಲೂಕು ಸಮಿತಿಯಿಂದ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪವನ್‌ಕುಮಾರ್.ಎಸ್.ದಂಡಪ್ಪನವರಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಸ್ವಚ್ಛ ವಾಹಿನಿ ನೌಕರರ ಮುಖಂಡರಾದ ತಾಯಮ್ಮ ಮಾತನಾಡಿ, ಸರಕಾರದ ಆದೇಶ ಹಾಗೂ ನಿಯಮದಂತೆ ಸ್ವಚ್ಛ ವಾಹಿನಿ ಚಾಲಕರಿಗೆ ಮಾಸಿಕ ವೇತನ 7500, ಸ್ವಚ್ಛತೆ ಕಸ ವಿಂಗಡಣೆ ಮಾಡುವ ಸಿಬ್ಬಂದಿಗಳಿಗೆ ಮಾಸಿಕ 6000 ನೀಡುವಂತೆ ಆದೇಶವಿದೆ. ಆದರೆ ಕೆಲವು ಗ್ರಾಮ ಪಂಚಾಯಿತಿಗಳು ಈ ವೇತನ ನೀಡದೆ ತಾರತಮ್ಯ ಮಾಡುತ್ತಿದೆ. ಇನ್ನು ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಆರರಿಂದ ಏಳು ತಿಂಗಳುಗಳವರೆಗೂ ವೇತನ ಬಾಕಿಯಿರುತ್ತದೆ. ಇದರಿಂದ ದಿನ ನಿತ್ಯದ ಜೀವನ ನಿರ್ವಹಣೆಗೆ ಬಹಳ ತೊಂದರೆಯಾಗುತ್ತಿದೆ. ವೇತನವೇ ನಮ್ಮ ಕುಟುಂಬದ ಏಕೈಕ ಆದಾಯ ಮೂಲವಾಗಿದ್ದರಿಂದ ವೇತನವು ವಿಳಂಬವು ಆರ್ಥಿಕ ಸಂಕಷ್ಟಕ್ಕೆ ಕಾರಣವಾಗಿರುತ್ತದೆ. ಆದ್ದರಿಂದ ಮಾನವೀಯತೆಯ ದೃಷ್ಟಿಯಿಂದ ಸ್ವಚ್ಛ ವಾಹಿನಿ ಚಾಲಕರಿಗೆ ಹಾಗೂ ಸ್ವಚ್ಛತೆ ಕಸ ನಿರ್ವಹಣೆ ಮಾಡುವ ಸಿಬ್ಬಂದಿಗಳ ಬಾಕಿ ವೇತನವನ್ನು ಪಾವತಿಸಬೇಕು. ಅಲ್ಲದೇ ಸಿಬ್ಬಂದಿಗಳಿಗೆ ಸುರಕ್ಷತಾ ಉಪಕರಣಗಳಾದ ಗ್ಲೌಸ್, ಮಾಸ್ಕ್, ಗಾಗಲ್ಸ್, ಶೀಲ್ಡ್, ರಬ್ಬರ್, ಶೂಷ್, ಸಾನಿಟೈಜರ್, ಸಾಬೂನು ಇನ್ನಿತರ ಸ್ವಚ್ಛತಾ ಪರಿಕರಗಳನ್ನು ನೀಡಬೇಕೆಂದು ಮನವಿ ಮಾಡಿದರು.

ಈ ವೇಳೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪವನ್‌ಕುಮಾರ್.ಎಸ್.ದಂಡಪ್ಪನವರ್ ಮಾತನಾಡಿ, ಎಲ್ಲಾ ಸ್ವಚ್ಛತಾ ನೌಕರರಿಗೆ ವೇತನವನ್ನು ನೀಡಲಾಗುತ್ತಿದೆ. ಬಾಕಿಯಿರುವ ಪಂಚಾಯಿತಿಗಳಲ್ಲಿನ ಅಧಿಕಾರಿಗಳೊಂದಿಗೆ ಚರ್ಚಿಸಿ ವೇತನವನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.  

ಇದೇ ವೇಳೆ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಸಂಘ(ಸಿಐಟಿಯು ಸಂಯೋಜಿತ) ತಾಲೂಕು ಸಮಿತಿ ಅಧ್ಯಕ್ಷ ವೆಂಕಟಸುಬ್ಬರೆಡ್ಡಿ, ಪ್ರಧಾನ ಕಾರ್ಯದರ್ಶಿ ಜಿಲಾನ್‌ಭಾಷ, ಖಜಾಂಚಿ ಟಿ.ಮಹಭಾಷ, ಸ್ವಚ್ಛವಾಹಿನಿ ನೌಕರರ ಸಂಘದ ಪದಾಧಿಕಾರಿ ಕರಿಯಪ್ಪ ಇನ್ನಿತರರು ಉಪಸ್ಥಿತರಿದ್ದರು.  

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News