×
Ad

ಫೆ.11, 12ರಂದು ಕಂಪ್ಲಿ ಉತ್ಸವ : ಶಾಸಕ ಜೆ.ಎನ್.ಗಣೇಶ್

Update: 2026-01-18 23:51 IST

ಕಂಪ್ಲಿ: ತಾಲೂಕಿನ ಸಾಂಸ್ಕೃತಿಕ ಹೆಮ್ಮೆಯ ಸಂಕೇತವಾದ 'ಕಂಪ್ಲಿ ಉತ್ಸವ'ವನ್ನು ಫೆ.11 ಮತ್ತು 12ರಂದು ಹಾಗೂ 'ಕುರುಗೋಡು ಉತ್ಸವ'ವನ್ನು ಫೆ.15 ಮತ್ತು 16ರಂದು ಹಮ್ಮಿಕೊಳ್ಳಲಾಗುವುದು ಎಂದು ಶಾಸಕ ಜೆ.ಎನ್.ಗಣೇಶ್‌ ಘೋಷಿಸಿದರು.

ಪಟ್ಟಣದ ಕೊಟ್ಟಾಲ್ ಪ್ರದೇಶದಲ್ಲಿ 2024-25ನೇ ಸಾಲಿನ ಕೆಕೆಆರ್‌ಡಿಬಿ (KKRDB) ಯೋಜನೆಯಡಿ ಸುಮಾರು 50 ಲಕ್ಷ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಉತ್ಸವಗಳ ಯಶಸ್ವಿ ಆಯೋಜನೆಗಾಗಿ ಸರ್ಕಾರಕ್ಕೆ 5 ಕೋಟಿ ರೂ. ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ಸರ್ಕಾರ ಕೇವಲ ಒಂದೆರಡು ಕೋಟಿ ರೂ. ನೀಡುವುದಾಗಿ ತಿಳಿಸಿದೆ. ಇಷ್ಟು ಕಡಿಮೆ ಅನುದಾನದಲ್ಲಿ ಉತ್ಸವ ಮಾಡುವುದು ಕಷ್ಟಕರವಾಗಿರುವುದರಿಂದ, ಹೆಚ್ಚಿನ ಹಣ ಬಿಡುಗಡೆ ಮಾಡುವಂತೆ ಸಚಿವರಿಗೆ ಮನವಿ ಮಾಡಲಾಗಿದೆ. ಕ್ಷೇತ್ರಾದ್ಯಂತ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಶಾಸಕರು ತಿಳಿಸಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮುಖಂಡ ಎಂ. ಸುಧೀರ್ ಮಾತನಾಡಿ, ಸ್ಥಳೀಯ ಸ್ಮಶಾನದ ಸುತ್ತಲೂ ತಂತಿ ಬೇಲಿ ಅಳವಡಿಸಿ, ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಅಭಿವೃದ್ಧಿಪಡಿಸಬೇಕು. ಹಾಗೆಯೇ ನಾರಿಹಳ್ಳದಲ್ಲಿ ತುಂಬಿರುವ ಹೂಳನ್ನು ತೆರವುಗೊಳಿಸಿ ಹರಿವಿಗೆ ಅನುಕೂಲ ಮಾಡಿಕೊಡಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪಿಡಿಒ ಅಪರಂಜಿ, ಪ್ರಮುಖ ಮುಖಂಡರಾದ ಎಂ.ಸುಧೀರ್, ಕೆ.ರವಿಚಂದ್ರ, ಸುಧಾಕರ, ಈರಣ್ಣ, ದುಬ್ಬಾರೆಡ್ಡಿ, ಮಲ್ಲಿಕಾರ್ಜುನ, ನಾಗರಾಜ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News