ಬಳ್ಳಾರಿಯ ಕಂಪ್ಲಿ ಬಳಿ ಪಾಮ್ ಆಯಿಲ್ ಟ್ಯಾಂಕರ್ ಪಲ್ಟಿ : ಎಣ್ಣೆಗಾಗಿ ಕೊಡ-ಬಿಂದಿಗೆಗಳೊಂದಿಗೆ ಮುಗಿಬಿದ್ದ ಜನ!
ಕಂಪ್ಲಿ: ತಾಲೂಕಿನ ದೇವಲಾಪುರ ಗ್ರಾಮದ ಮಾರೆಮ್ಮ ದೇವಸ್ಥಾನದ ಬಳಿ ಪಾಮ್ ಆಯಿಲ್ ತುಂಬಿದ್ದ ಟ್ಯಾಂಕರ್‌ವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಶುಕ್ರವಾರ ನಡೆದಿದೆ.
ಈ ವೇಳೆ ಟ್ಯಾಂಕರ್‌ನಿಂದ ಸೋರುತ್ತಿದ್ದ ಎಣ್ಣೆಯನ್ನು ಸಂಗ್ರಹಿಸಲು ಸುತ್ತಮುತ್ತಲಿನ ಗ್ರಾಮಸ್ಥರು ಕೊಡ, ಬಿಂದಿಗೆ ಹಾಗೂ ಬಕೆಟ್‌ಗಳೊಂದಿಗೆ ಮುಗಿಬಿದ್ದ ದೃಶ್ಯ ಕಂಡುಬಂತು.
ಪಾಮ್ ಆಯಿಲ್ ತುಂಬಿದ್ದ ಟ್ಯಾಂಕರ್ ಚಳ್ಳಕೇರಿಯಿಂದ ಗಂಗಾವತಿಗೆ ತೆರಳುತ್ತಿತ್ತು. ದೇವಲಾಪುರ ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಕಂದಕಕ್ಕೆ ಉರುಳಿ ಬಿದ್ದಿದೆ. ಅಪಘಾತದ ರಭಸಕ್ಕೆ ಟ್ಯಾಂಕರ್ ಬಿರುಕು ಬಿಟ್ಟಿದ್ದು, ಎಣ್ಣೆ ಹಳ್ಳದಂತೆ ಹರಿಯಲಾರಂಭಿಸಿದೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಮಹಿಳೆಯರು, ಪುರುಷರು ಮತ್ತು ಮಕ್ಕಳು ಎನ್ನದೆ ನೂರಾರು ಜನರು ಪ್ಲಾಸ್ಟಿಕ್ ಕ್ಯಾನ್ ಹಾಗೂ ಡ್ರಮ್‌ಗಳನ್ನು ಹಿಡಿದುಕೊಂಡು ಸ್ಥಳಕ್ಕೆ ಧಾವಿಸಿದರು. ಎಣ್ಣೆ ಹಿಡಿಯಲು ಜನರ ನಡುವೆ ಭಾರಿ ಪೈಪೋಟಿ ಏರ್ಪಟ್ಟಿತ್ತು.
ಅಪಘಾತದಲ್ಲಿ ಲಾರಿ ಚಾಲಕನಿಗೆ ತೀವ್ರ ಗಾಯಗಳಾಗಿದ್ದು, ಅವರನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸ್ಥಳಕ್ಕೆ ಆಗಮಿಸಿದ ಕುಡುತಿನಿ ಠಾಣೆಯ ಪೊಲೀಸರು, ಜನರನ್ನು ಚದುರಿಸಲು ಮತ್ತು ಪರಿಸ್ಥಿತಿ ನಿಯಂತ್ರಿಸಲು ಹರಸಾಹಸ ಪಟ್ಟರು.
ರಸ್ತೆಯ ಮೇಲೆ ಎಣ್ಣೆ ಚೆಲ್ಲಿದ್ದರಿಂದ ವಾಹನಗಳು ಸ್ಕಿಡ್ ಆಗುವ ಭೀತಿ ಎದುರಾಗಿತ್ತು. ಹೀಗಾಗಿ ವಾಹನ ಸವಾರರು ಅತ್ಯಂತ ನಿಧಾನಗತಿಯಲ್ಲಿ ಸಂಚರಿಸಿದರು. ಇದರಿಂದ ಕೆಲಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ವ್ಯತ್ಯಯ ಉಂಟಾಗಿತ್ತು. ಈ ಕುರಿತು ಕುಡುತಿನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.