ಬಳ್ಳಾರಿ | ಕಾಂಗ್ರೆಸ್ ಬಲಿಷ್ಠಗೊಳಿಸಲು ಸಂಘಟನಾ ಸೃಜನ ಅಭಿಯಾನ
ಬಳ್ಳಾರಿ : ಬಳ್ಳಾರಿ ಜಿಲ್ಲಾ ಗ್ರಾಮೀಣ ‘ಕಾಂಗ್ರೆಸ್' ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಜುಲೈ 26ರಿಂದ 31ರವರೆಗೆ ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ವ್ಯಾಪಕ ಪ್ರವಾಸ ಕೈಗೊಂಡು, ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿ ಅಭಿಪ್ರಾಯ ಸಂಗ್ರಹಿಸಲಾಗುವುದು’ ಎಂದು ಎಐಸಿಸಿ ಜಿಲ್ಲಾ ವೀಕ್ಷಕ ಅರುಣ್ ಯಾದವ್ ತಿಳಿಸಿದರು.
ಪಟ್ಟಣದ ಶಾಸಕರ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರ ಸಭೆ ಹಾಗೂ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಸಂಘಟನಾ ಸೃಜನ ಅಭಿಯಾನದಡಿ ಅಹಮದಾಬಾದ್ ಸಭೆಯ ತೀರ್ಮಾನದಂತೆ ಪಕ್ಷವನ್ನು ತಳಮಟ್ಟದಿಂದ ಬಲಿಷ್ಠಗೊಳಿಸಲು ಹಾಗೂ ಕಾರ್ಯಕರ್ತರ ಆಧಾರಿತ ಪಕ್ಷವನ್ನಾಗಿ ರೂಪಿಸಲು ವಿಕೇಂದ್ರೀಕರಣಕ್ಕೆ ಆದ್ಯತೆ ನೀಡಲಾಗುತ್ತಿದೆ’ ಎಂದರು.
ಜಿಲ್ಲಾ, ಬ್ಲಾಕ್ ಮಟ್ಟದ ಸಭೆ ನಡೆಸಿ ಅಭಿಪ್ರಾಯ ಸಂಗ್ರಹ ನಡೆಯಲಿದೆ. ಪಕ್ಷಕ್ಕಾಗಿ ಶ್ರಮಿಸುವ ಹಾಗೂ ಪ್ರಾಮಾಣಿಕ ಕಾರ್ಯಕರ್ತರಿಗೆ ಸೂಕ್ತ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದ ವೀಕ್ಷಕರು, ‘ಹಿರಿಯ ನಾಯಕರಿಂದ ಬೂತ್ ಮಟ್ಟದ ಕಾರ್ಯಕರ್ತರವರೆಗೆ ಜನಸಾಮಾನ್ಯರನ್ನು ಭೇಟಿ ಮಾಡಲಾಗುವುದು’ ಎಂದರು.
ಕಾಂಗ್ರೆಸ್ ಜಿಲ್ಲಾ ಘಟಕದ ಸಾಮಾಜಿಕ ಜಾಲತಾಣದ ಮುಖ್ಯಸ್ಥ ಎನ್. ಹಬೀಬಿ ರೆಹಮಾನ್ ಮಾತನಾಡಿ, ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕರು ಗೆಲ್ಲುವಂತೆ ಕಾರ್ಯಕರ್ತರು ಮಾಡಿದ್ದೇವೆ. ಹಲವರು ಕಾಂಗ್ರೆಸ್‌ನತ್ತ ಒಲವು ತೋರುತ್ತಿದ್ದಾರೆ. ಈ ಮಟ್ಟಿಗೆ ಪಕ್ಷ ಬಲಿಷ್ಠವಾಗಿರುವಾಗ, ಸಂಘಟನೆಯ ಕಾರ್ಯಕರ್ತರಿಗೆ ಜಿಲ್ಲಾ ಗ್ರಾಮೀಣ ಘಟಕದ ಅಧ್ಯಕ್ಷರನ್ನು ಆಯ್ಕೆ ಮಾಡುವುದು ಸೂಕ್ತ ಎಂಬುದು ನನ್ನ ಅಭಿಪ್ರಾಯ ಎಂದು ತಿಳಿಸಿದರು.
ಈ ವೇಳೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸೈಯದ್ ಅಲಿ ಮೆಹಬಂದರ್, ಬಳ್ಳಾರಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಶಿವಯೋಗಿ, ಕೊಪ್ಪಳ ಕೆಪಿಸಿಸಿ ಪದಾಧಿಕಾರಿ ಕಿಶೋರಿ ಬಂಡೂರು, ಕಂಪ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ. ಶ್ರೀನಿವಾಸ್ ರಾವ್, ಕುರುಗೋಡು, ಕೋಳೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಚಾನಳ್ ಬಸವರಾಜ್ ಗೌಡ್ರು, ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು, ಸೇರಿದಂತೆ ವಿವಿಧ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು, ಮಾಜಿ ಅಧ್ಯಕ್ಷರುಗಳು, ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.