×
Ad

ಬಳ್ಳಾರಿ| ಕೆಪಿಎಸ್‌ಗೆ ಶಾಲೆಗಳ ವಿಲೀನ ವಿರೋಧಿಸಿ ಪೋಷಕರ ಆಕ್ರೋಶ

Update: 2026-05-19 19:50 IST

ಸಂಡೂರು : ತಾಲೂಕಿನ ನರಸಾಪುರ ಹಾಗೂ ಚಪ್ಪರದಳ್ಳಿ ಸರಕಾರಿ ಶಾಲೆಗಳನ್ನು ಕೆಪಿಎಸ್ ಶಾಲೆಗೆ ವಿಲೀನಗೊಳಿಸುವ ಕ್ರಮವನ್ನು ಕೈಬಿಡಬೇಕೆಂದು ಆಗ್ರಹಿಸಿ ಪೋಷಕರು, ನಾಗರಿಕರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಬಿಇಒ ಅವರಿಗೆ ಮನವಿ ಪತ್ರವನ್ನು ಶಾಲೆಗಳ ಮುಖ್ಯೋಪಾಧ್ಯಾಯರ ಮೂಲಕ ಸಲ್ಲಿಸಿದರು.

ಶಾಲೆಗಳ ವಿಲೀನಕ್ಕೆ ವಿರೋಧ ವ್ಯಕ್ತಪಡಿಸಿದ ನೂರಾರು ಪೋಷಕರು ಹಾಗೂ ಸಾರ್ವಜನಿಕರ ಸಹಿಗಳನ್ನು ಕೂಡ ಮನವಿ ಪತ್ರದೊಂದಿಗೆ ನೀಡಲಾಯಿತು. ನರಸಾಪುರ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೂ ಪ್ರತ್ಯೇಕ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಪೋಷಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು  ಭಾಗವಹಿಸಿದ್ದರು.

ಹೋರಾಟಕ್ಕೆ ಬೆಂಬಲ ನೀಡಿ ಮಾತನಾಡಿದ ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಡಾ. ಪ್ರಮೋದ್ ಎನ್, “ರಾಜ್ಯ ಸರ್ಕಾರವು ಬಜೆಟ್‌ನಲ್ಲಿ ಘೋಷಿಸಿರುವಂತೆ ಜೂನ್‌ನಿಂದ ಹೊಸ ಕೆಪಿಎಸ್ ಶಾಲೆಗಳನ್ನು ಆರಂಭಿಸಲು ಮುಂದಾಗಿದೆ. 3 ರಿಂದ 5 ಕಿ.ಮೀ ವ್ಯಾಪ್ತಿಯ ಶಾಲೆಗಳನ್ನು ವಿಲೀನಗೊಳಿಸುವ ಕುರಿತು 2025ರ ಅಕ್ಟೋಬರ್ 15ರಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ನಮ್ಮೂರ ಶಾಲೆ ಉಳಿಸಬೇಕೆಂದು ಕಳೆದ ಐದು ತಿಂಗಳಿನಿಂದ ಗ್ರಾಮ ಮಟ್ಟದಿಂದ ರಾಜ್ಯ ಮಟ್ಟದವರೆಗೆ ಪ್ರತಿಭಟನೆ ಮತ್ತು ಹೋರಾಟಗಳನ್ನು ನಡೆಸಿದ್ದೇವೆ. ಜನರ ಧ್ವನಿಗೆ ಸ್ಪಂದಿಸದೆ ಸರಕಾರ ಕೆಪಿಎಸ್ ಯೋಜನೆಯನ್ನು ಹಠಾತ್ ಮುಂದುವರಿಸುತ್ತಿದೆ. ಶಾಲೆ ಮುಚ್ಚದಂತೆ ಎಲ್ಲರೂ ಒಗ್ಗಟ್ಟಾಗಿ ದೊಡ್ಡ ಹೋರಾಟಕ್ಕೆ ಸಜ್ಜಾಗಬೇಕು” ಎಂದು ಕರೆ ನೀಡಿದರು.

ಎಐಡಿಎಸ್‌ಓ ಜಿಲ್ಲಾ ಕಾರ್ಯದರ್ಶಿ ಕಂಬಳಿ ಮಂಜುನಾಥ ಮಾತನಾಡಿ, “ದ್ವಿಭಾಷಾ ಶಿಕ್ಷಣದ ಹೆಸರಿನಲ್ಲಿ ಕನ್ನಡ ಮಾಧ್ಯಮವನ್ನು ದುರ್ಬಲಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಯಾವುದೇ ಕಾರಣಕ್ಕೂ ಕನ್ನಡ ಮಾಧ್ಯಮವನ್ನು ತೆಗೆದುಹಾಕುವುದನ್ನು ಒಪ್ಪಲು ಸಾಧ್ಯವಿಲ್ಲ” ಎಂದು ಹೇಳಿದರು.

ಎಐಎಂಎಸ್‌ಎಸ್ ಮಹಿಳಾ ಸಂಘಟನೆಯ ವಿದ್ಯಾ ಮಾತನಾಡಿ, “ಮೊದಲು ನಮ್ಮೂರ ಶಾಲೆಗಳಿಗೆ ಸಮರ್ಪಕ ಸೌಲಭ್ಯ ಹಾಗೂ ಶಿಕ್ಷಕರನ್ನು ಒದಗಿಸಿ ಅಭಿವೃದ್ಧಿಪಡಿಸಬೇಕು. ಯಾವುದೇ ಕಾರಣಕ್ಕೂ ಸ್ಥಳೀಯ ಶಾಲೆಗಳನ್ನು ಮುಚ್ಚಬಾರದು” ಎಂದು ಒತ್ತಾಯಿಸಿದರು.

ಈ ವೇಳೆ ಕಾರ್ಮಿಕ ಮುಖಂಡರಾದ ಸುರೇಶ್, ಅಂಬರೀಷ್, ಪೋಷಕರಾದ ಉಷಾ, ಫಕ್ರುದ್ದೀನ್, ಅರ್ಜುನ್, ಗಂಗಮ್ಮ, ರೇಣುಕಾ, ಶಿಲ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News