ಮೇ 20ರಂದು ಸಮರ್ಪಣಾ ಸಂಕಲ್ಪ ಸಮಾವೇಶ : ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ
ವಿಜಯನಗರ(ಹೊಸಪೇಟೆ) : : ರಾಜ್ಯ ಸರಕಾರವು 2 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಮೇ 20 ರಂದು ವಿಜಯನಗರ ಜಿಲ್ಲೆಯ ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಸಮರ್ಪಣಾ ಸಂಕಲ್ಪ ಸಮಾವೇಶ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
ಶುಕ್ರವಾರ ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಇನ್ನಿತರ ಸಚಿವರು, ಶಾಸಕರೊಂದಿಗೆ ಕಾರ್ಯಕ್ರಮದ ಆಯೋಜನೆ ಕುರಿತು ಮಾಹಿತಿ ಪಡೆದುಕೊಂಡು, ಸ್ಥಳ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
2023ರ ಮೇ20 ರಂದು ನಮ್ಮ ಸರಕಾರ ಅಸ್ತಿತ್ವಕ್ಕೆ ಬಂತು. ಅಂದು ನಡೆದ ಮೊದಲ ಸಚಿವ ಸಂಪುಟ ಸಭೆಯಲ್ಲಿ ಪಂಚ ಗ್ಯಾರಂಟಿ ಜಾರಿ ಕುರಿತಂತೆ ಚರ್ಚಿಸಲಾಗಿತ್ತು. ಪ್ರಥಮವಾಗಿ ಶಕ್ತಿ ಯೋಜನೆ, ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮೀ ಮತ್ತು ಯುವನಿಧಿ ಸೇರಿದಂತೆ ಹಂತ-ಹಂತವಾಗಿ ಜಾರಿಗೆ ತಂದು ನುಡಿದಂತೆ ನಡೆದಿದ್ದೇವೆ ಎಂದು ಅವರು ಹೇಳಿದರು.
ಕಳೆದ ವಿಧಾನಸಭೆ ಚುನಾವಣೆ ಮತ್ತು ಉಪಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಬಹುಮತದಿಂದ ಆರಿಸಿ ಗೆಲ್ಲಿಸಿದಂತಹ ಮತದಾರರಿಗೆ ನಮ್ಮ ಸರಕಾರವು ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ, ಕೊಟ್ಟ ಮಾತಿನಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲ ಎಂದು ಹಲವರು ಟೀಕಿಸುತ್ತಿದ್ದಾರೆ. ಈಗಾಗಲೇ ಗ್ಯಾರಂಟಿ ಯೋಜನೆಗಳಿಗೆ 90 ಸಾವಿರ ಕೋಟಿ ರೂ. ಖರ್ಚು ಮಾಡಲಾಗಿದೆ. 2024-25 ನೇ ಸಾಲಿನಲ್ಲಿ 51 ಸಾವಿರ ಕೋಟಿ ರೂ. ಗಳನ್ನು ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸಲಾಗಿದೆ. ಕಳೆದ ವರ್ಷ ಗ್ಯಾರಂಟಿ ಯೋಜನೆಗಳಿಗಾಗಿಯೇ 52.9 ಸಾವಿರ ಕೋಟಿ ರೂ. ಮೀಸಲಿಡಲಾಗಿತ್ತು. ಈ ವರ್ಷ 50.18 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ, ಅಗತ್ಯಬಿದ್ದಲ್ಲಿ ಇನ್ನು ಹೆಚ್ಚಿನ ಅನುದಾನ ನೀಡಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು.
2024-25 ನೇ ಸಾಲಿನಲ್ಲಿ 3.71 ಲಕ್ಷ ಕೋಟಿ ರೂ. ಬಜೆಟ್ ಗಾತ್ರವಿತ್ತು. 2025-26 ನೇ ಸಾಲಿನಲ್ಲಿ ಬಜೆಟ್ ನ ಗಾತ್ರವನ್ನು 4.09 ಲಕ್ಷ ಕೋಟಿ ರೂ.ಗೆ ಹೆಚ್ಚಿಸಲಾಗಿದೆ. ಅಂದರೆ ಸುಮಾರು 38 ಸಾವಿರ ಕೋಟಿ ರೂ.ಹೆಚ್ಚಳವಾಗಿದೆ ಎಂದು ತಿಳಿಸಿದ ಮುಖ್ಯಮಂತ್ರಿ ಅವರು, ನುಡಿದಂತೆ ನಡೆದ ಸರಕಾರ ನಮ್ಮದು. ಅಭಿವೃದ್ಧಿ ಕಾರ್ಯಗಳಿಗೆ ಯಾವುದೇ ರೀತಿಯ ಅನುದಾನದ ಕೊರತೆ ಇಲ್ಲ. ನಮ್ಮ ಸರಕಾರ ಜಾರಿಗೊಳಿಸಿದ ಗ್ಯಾರಂಟಿ ಯೋಜನೆಗಳು ದೇಶಕ್ಕೆ ಮಾದರಿಯಾಗಿವೆ ಎಂದು ಮುಖ್ಯಮಂತ್ರಿ ವಿಶ್ವಾಸ ವ್ಯಕ್ತಪಡಿಸಿದರು.
ಕೆಕೆಆರ್‌ಡಿಬಿ ಗೆ 5 ಸಾವಿರ ಕೋಟಿ ರೂ. :
ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳ ಅಭಿವೃದ್ಧಿಗೆ ನಮ್ಮ ರಾಜ್ಯ ಸರಕಾರವು 5 ಸಾವಿರ ಕೋಟಿ ರೂ. ನೀಡಿದೆ. ಈ ಭಾಗದ 371 (ಜೆ) ವಿಶೇಷ ಸ್ಥಾನಮಾನವನ್ನು ನಮ್ಮ ಸರಕಾರವೇ ಜಾರಿಗೊಳಿಸಿದ್ದು ಎಂದು ಅವರು ಹೇಳಿದರು.
1.03 ಲಕ್ಷ ಹಕ್ಕುಪತ್ರ ವಿತರಣೆ: ಸಮರ್ಪಣಾ ಸಂಕಲ್ಪ ಸಮಾವೇಶ ಕಾರ್ಯಕ್ರಮದಲ್ಲಿ ಹಾಡಿ, ಹಟ್ಟಿ ಮತ್ತು ತಾಂಡಾ ಪ್ರದೇಶದ ಕನಿಷ್ಠ 1.03 ಲಕ್ಷ ಫಲಾನುಭವಿಗಳಿಗೆ ಕಂದಾಯ ಇಲಾಖೆಯಿಂದ ಹಕ್ಕುಪತ್ರಗಳನ್ನು ವಿತರಣೆ ಮಾಡಲಾಗುತ್ತದೆ. ಕಾರ್ಯಕ್ರಮಕ್ಕೆ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ವಿರೋಧ ಪಕ್ಷದ ನಾಯಕರು, ಶಾಸಕರನ್ನು ಆಹ್ವಾನಿಸಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಫಲಾನುಭವಿಗಳನ್ನು ಕರೆತರಲಾಗುವುದು. ಕನಿಷ್ಠ 3 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನಸ್ತೋಮ ಸೇರುವ ನಿರೀಕ್ಷೆಯಿದೆ. ಇದಕ್ಕೆ ಬೇಕಾದ ಅಗತ್ಯ ವ್ಯವಸ್ಥೆ ಕೈಗೊಳ್ಳಲಾಗುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಬಿ.ಝೆಡ್.ಝಮೀರ್ ಅಹ್ಮದ್ ಖಾನ್, ಸಚಿವರಾದ ಎಚ್.ಕೆ.ಪಾಟೀಲ್, ಕೃಷ್ಣ ಬೈರೇಗೌಡ, ಶಿವರಾಜ ತಂಗಡಗಿ, ಎನ್.ಚಲುವರಾಯಸ್ವಾಮಿ, ಭೈರತಿ ಸುರೇಶ್, ಭೋಸರಾಜು, ಸಂಸದ ಈ.ತುಕಾರಾಮ್, ಶಾಸಕರಾದ ಎಚ್.ಆರ್.ಗವಿಯಪ್ಪ, ಬಿ.ನಾಗೇಂದ್ರ, ಜೆ.ಎನ್.ಗಣೇಶ್, ಎಂ.ಪಿ.ಲತಾ, ಶ್ರೀನಿವಾಸ ನಾಯ್ಕ ಮತ್ತು ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕರ್, ಪ್ರಶಾಂತ್ ಕುಮಾರ್ ಮಿಶ್ರಾ, ಜಿಪಂ ಸಿಇಒ ಮುಹಮ್ಮದ್ ಹಾರಿಸ್ ಸುಮೈರ್, ಮುಹಮ್ಮದ್ ನೊಂಗ್ಜಾಯ್ ಅಕ್ರಂ ಅಲಿ ಪಾಷಾ, ಎಸ್ಪಿಗಳಾದ ಡಾ.ಶೋಭರಾಣಿ.ವಿ.ಜೆ., ಶ್ರೀಹರಿಬಾಬು ಸೇರಿದಂತೆ ಅನೇಕರು ಹಾಜರಿದ್ದರು.