ಸತೀಶ್ ಜಾರಕಿಹೊಳಿ ಅವರನ್ನು ಗುರಿಯಾಗಿಸಿಕೊಂಡು ಈಡಿ ದಾಳಿ ನಡೆಸಲಾಗಿದೆ : ಬಿ.ನಬೀಸಾಬ್ ಆರೋಪ
ಕಂಪ್ಲಿ (ಬಳ್ಳಾರಿ): ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ಈಡಿ) ದಾಳಿ ನಡೆಸಿರುವುದನ್ನು ಖಂಡಿಸಿ ಮಾನವ ಬಂಧುತ್ವ ವೇದಿಕೆ ಸಂಘಟನಾ ಸಭೆ ನಡೆಸಿ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತು.
ಸಭೆಯಲ್ಲಿ ಮಾತನಾಡಿದ ಮಾನವ ಬಂಧುತ್ವ ವೇದಿಕೆ ಕಂಪ್ಲಿ ತಾಲೂಕು ಸಂಚಾಲಕ ಬಿ. ನಬಿಸಾಬ್, ಸತೀಶ್ ಜಾರಕಿಹೊಳಿ ಅವರ ರಾಜಕೀಯ ಪ್ರಭಾವ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹೆಚ್ಚುತ್ತಿರುವ ಹಿನ್ನೆಲೆ, ಅವರನ್ನು ಗುರಿಯಾಗಿಸಿಕೊಂಡು ಇಡಿ ದಾಳಿ ನಡೆಸಲಾಗಿದೆ ಎಂದು ಆರೋಪಿಸಿದರು.
ವಿರೋಧ ಪಕ್ಷದ ನಾಯಕರನ್ನು ರಾಜಕೀಯವಾಗಿ ಹತ್ತಿಕ್ಕಲು ಕೇಂದ್ರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಸತೀಶ್ ಜಾರಕಿಹೊಳಿ ವಿರುದ್ಧದ ದಾಳಿ ರಾಜಕೀಯ ಪ್ರೇರಿತವಾಗಿದ್ದು, ಇದಕ್ಕೆ ಕಾನೂನಾತ್ಮಕವಾಗಿ ಉತ್ತರ ನೀಡಲಾಗುವುದು ಎಂದು ಹೇಳಿದರು.
ಇಂತಹ ದಾಳಿಗಳು ಮುಂದುವರಿದರೆ ರಾಜ್ಯಾದ್ಯಂತ ಕಾರ್ಯಕರ್ತರು ಹಾಗೂ ಅಭಿಮಾನಿಗಳೊಂದಿಗೆ ರಸ್ತೆಗಿಳಿದು ಹೋರಾಟ ನಡೆಸಿ ಬಿಜೆಪಿ ಸರ್ಕಾರಕ್ಕೆ ತಕ್ಕ ಉತ್ತರ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಅಂಜುಮನ್ ಕಮಿಟಿ ಅಧ್ಯಕ್ಷ ಅಬ್ದುಲ್ ಕರೀಂ ಲಡ್ಡು, ಸಣಾಪುರ ಮರಿಸ್ವಾಮಿ, ವಸಂತರಾಜ ಕಹಳೆ, ಜಾಫರ್, ರವಿ ಮಣ್ಣೂರು, ವಾಸು, ರಾಜಾಭಕ್ಷಿ, ಶಿವರಾಮ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.