ಸಿರುಗುಪ್ಪ | ಅಕ್ರಮ ರಸಗೊಬ್ಬರ ಸಾಗಾಟ ಯತ್ನ ಆರೋಪ ; 1.80 ಲಕ್ಷ ರೂ. ಮೌಲ್ಯದ 680 ಚೀಲ ಜಪ್ತಿ
ಸಿರುಗುಪ್ಪ: ತಾಲೂಕಿನ ಬುದೂಗುಪ್ಪ ಗ್ರಾಮದಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ರಸಗೊಬ್ಬರಗಳ ಮೇಲೆ ಕೃಷಿ ಇಲಾಖೆ ಅಧಿಕಾರಿಗಳು ಮಿಂಚಿನ ದಾಳಿ ನಡೆಸಿ, 1.80 ಲಕ್ಷ ರೂ. ಮೌಲ್ಯದ 680 ಚೀಲ ರಸಗೊಬ್ಬರಗಳನ್ನು ವಶಪಡಿಸಿಕೊಂಡಿದ್ದಾರೆ.
ತಾಲೂಕು ಸಹಾಯಕ ಕೃಷಿ ನಿರ್ದೇಶಕ ಮಂಜುನಾಥ ರೆಡ್ಡಿ ಅವರ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಲಾರಿಯಲ್ಲಿ ತುಂಬಲಾಗಿದ್ದ 680 ಚೀಲ ರಸಗೊಬ್ಬರಗಳು ಪತ್ತೆಯಾಗಿದ್ದು, ಅವುಗಳ ಒಟ್ಟು ಮೌಲ್ಯ 1,80,880 ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬುದೂಗುಪ್ಪ ಗ್ರಾಮದ ಆನು ಆಗ್ರೊ ಕೆಮಿಕಲ್ಸ್ ಸಂಸ್ಥೆಯ ರಂಗನಾಥ ರೆಡ್ಡಿ ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ರಸಗೊಬ್ಬರಗಳನ್ನು ಅಕ್ರಮವಾಗಿ ಕೇರಳ ರಾಜ್ಯಕ್ಕೆ ಸಾಗಾಟ ಮಾಡುತ್ತಿದ್ದ ಆರೋಪದಡಿ ಸಿರಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಜಾಗೃತದಳದ ಪ್ರಭಾರ ಸಹಾಯಕ ಕೃಷಿ ನಿರ್ದೇಶಕ ದಯಾನಂದ ಎಂ., ಬಳ್ಳಾರಿ ತಾಂತ್ರಿಕ ಉಪ ನಿರ್ದೇಶಕರ ಕಚೇರಿಯ ಕೃಷಿ ಅಧಿಕಾರಿ ಮನೋಹರ ರೆಡ್ಡಿ ಹಾಗೂ ಕರೂರು ಗ್ರಾಮದ ಕೃಷಿ ಅಧಿಕಾರಿ ಪರಮೇಶ್ವರ ರೆಡ್ಡಿ ಭಾಗವಹಿಸಿದ್ದರು.