ಕಂಪ್ಲಿ: ಮಹಿಳೆ ಇಡೀ ಕುಟುಂಬದ ಆಧಾರ ಸ್ತಂಭವಾಗಿದ್ದು, ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಅವರನ್ನು ದೇಶದ ಅತ್ಯುತ್ತಮ ಪ್ರಜೆಗಳನ್ನಾಗಿ ರೂಪಿಸುವ ಗುರುತರ ಜವಾಬ್ದಾರಿ ಆಕೆಯ ಮೇಲಿದೆ ಎಂದು ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಅವರ ಧರ್ಮಪತ್ನಿ ಶ್ರೀದೇವಿ ಗಣೇಶ್ ಅಭಿಪ್ರಾಯಪಟ್ಟರು.

ತಾಲೂಕಿನ ನಂ. 10 ಮುದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳಗೋಡ್‌ ಹಾಳ್ ಗ್ರಾಮದ ಶ್ರೀ ಕೆಂಚಮ್ಮ ದೇವಸ್ಥಾನದ ಮುಂಭಾಗದಲ್ಲಿ ಶುಕ್ರವಾರ ಆಯೋಜಿಸಿದ್ದ 101 ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರತಿಯೊಬ್ಬ ಮಹಿಳೆಗೂ ತವರು ಮನೆಯಿಂದ ಸೀರೆ ನೀಡಿ ಉಡಿ ತುಂಬುವ ಶಾಸ್ತ್ರ ಕೇವಲ ಸಂಪ್ರದಾಯವಲ್ಲ; ಅದೊಂದು ಭಾವನಾತ್ಮಕ ಬೆಸುಗೆ. ಭಾರತೀಯ ಸಂಸ್ಕೃತಿಯಲ್ಲಿ ಉಡಿ ತುಂಬುವ ಪದ್ಧತಿಗೆ ವಿಶೇಷ ಗೌರವವಿದೆ. ಇಂತಹ ಶ್ರೇಷ್ಠ ಸಂಪ್ರದಾಯವನ್ನು ಗ್ರಾಮೀಣ ಭಾಗದಲ್ಲಿ ಇಂದಿಗೂ ಜೀವಂತವಾಗಿಟ್ಟಿರುವುದು ಹೆಮ್ಮೆಯ ಸಂಗತಿ ಎಂದರು.

ಯುವ ಮುಖಂಡ ದೊಡ್ಡ ಬಸವರಾಜ ಬಡಗಿ ಮಾತನಾಡಿ, ಬೆಳಗೋಡ್‌ ಹಾಳ್ ಗ್ರಾಮದ ಇತಿಹಾಸದಲ್ಲೇ ಮೊದಲ ಬಾರಿಗೆ ಬೃಹತ್ ಉಚಿತ ಸಾಮೂಹಿಕ ವಿವಾಹ ಮಹೋತ್ಸವವನ್ನು ನವೆಂಬರ್ 15ರಂದು ಆಯೋಜಿಸಲಾಗಿದೆ. ಇದರ ಅಂಗವಾಗಿ 101 ಮಹಿಳೆಯರಿಗೆ ಸೀರೆ ವಿತರಿಸಿ, ಉಡಿ ತುಂಬುವ ಶಾಸ್ತ್ರ ನೆರವೇರಿಸಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖಂಡರಾದ ವೈ. ವಿರುಪಣ್ಣ, ನಬೀ ಸಾಬ್, ಕೆ. ಗಂಗಾಧರ, ರಾಮಕೃಷ್ಣ, ರೇಣುಕಪ್ಪ, ಸುಭಾನ್, ಮಹಾಂತೇಶ, ದುರುಗಪ್ಪ, ರವಿಕುಮಾರ, ಮರಿಸ್ವಾಮಿ, ಬಡಿಗಿ ದುರುಗಪ್ಪ, ಬಡಗಿ ಹನುಮಂತಪ್ಪ, ದೇವರಾಜ್ ಸೇರಿದಂತೆ ನೂರಾರು ಗ್ರಾಮಸ್ಥರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor