ಸಂಡೂರು: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಗ್ರಾಮೀಣ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಒತ್ತು ನೀಡುವ ಉದ್ದೇಶದಿಂದ ಪಟ್ಟಣದಲ್ಲಿ ಆಯೋಜಿಸಿದ್ದ ‘ದೀಪ ಸಂಜೀವಿನಿ’ ಕಾರ್ಯಕ್ರಮ ಮಂಗಳವಾರ ಕಳೆಗಟ್ಟಿತು.

ಶಾಸಕಿ ಅನ್ನಪೂರ್ಣ ತುಕಾರಾಂ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು ತಯಾರಿಸಿದ್ದ ಆಕರ್ಷಕ ಅಲಂಕಾರಿಕ ದೀಪಗಳು, ವೈವಿಧ್ಯಮಯ ಆಹಾರ ಹಾಗೂ ಆಹಾರೇತರ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳಿಗೆ ಭೇಟಿ ನೀಡಿದರು. ಅಲ್ಲದೆ, ಸ್ವತಃ ಉತ್ಪನ್ನಗಳನ್ನು ಖರೀದಿಸುವ ಮೂಲಕ ಮಹಿಳೆಯರ ಉದ್ಯಮಶೀಲತೆಗೆ ಬೆಂಬಲ ಸೂಚಿಸಿದರು.

‘ಕೌಶಲ್ಯ ಕರ್ನಾಟಕ ಪ್ರಶಸ್ತಿ’ ಪುರಸ್ಕೃತರಿಗೆ ಸನ್ಮಾನ :

ಇದೇ ಸಂದರ್ಭದಲ್ಲಿ ರಾಜ್ಯಮಟ್ಟದ ‘ಕೌಶಲ್ಯ ಕರ್ನಾಟಕ ಪ್ರಶಸ್ತಿ–2026’ ಪಡೆದ ಸಂಡೂರು ತಾಲೂಕಿನ ಸುಶೀಲನಗರ ಗ್ರಾಮದ ಸೋನಿಯಾ ಗಾಂಧಿ ಸ್ವಸಹಾಯ ಸಂಘದ ಮಹಿಳಾ ಸಾಧಕರನ್ನು ಸನ್ಮಾನಿಸಲಾಯಿತು.

ಬಳಿಕ ಮಾತನಾಡಿದ ಶಾಸಕಿ ಅನ್ನಪೂರ್ಣ ತುಕಾರಾಂ, ಗ್ರಾಮೀಣ ಮಹಿಳೆಯರು ವಿವಿಧ ಜೀವನೋಪಾಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು. ಸ್ವಂತ ಉದ್ಯಮಗಳನ್ನು ಸ್ಥಾಪಿಸಿ ಬೆಳೆಸುವ ಮೂಲಕ ಕುಟುಂಬದ ನಿರ್ವಹಣೆಯಲ್ಲಿ ಸ್ವಾವಲಂಬನೆ ಸಾಧಿಸುವುದು ಇಂದಿನ ತುರ್ತು ಅಗತ್ಯವಾಗಿದೆ. ಮಹಿಳೆಯರು ತಯಾರಿಸುವ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸುವ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ಮುಂದುವರಿಯಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷೆ ಆಶಾಲತಾ, ತಾಲೂಕು ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ನೂರುದ್ದೀನ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರೇಣುಕಾಚಾರ್ಯ ಸ್ವಾಮಿ, ತಾಲೂಕು ಯೋಜನಾಧಿಕಾರಿ ಹನುಮಗೌಡ, ಸಂಜೀವಿನಿ ತಾಲೂಕು ಒಕ್ಕೂಟದ ಉಪಾಧ್ಯಕ್ಷೆ ಲಕ್ಷ್ಮೀ, ಕಾರ್ಯದರ್ಶಿ ಹೇಮಲತಾ, ಪುರಸಭೆ ಪರಿಸರ ಅಧಿಕಾರಿ ಅನ್ನಪೂರ್ಣ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಂಜೀವಿನಿ ಅಭಿಯಾನದ ಸಿಬ್ಬಂದಿ ಹಾಗೂ ಸ್ವಸಹಾಯ ಸಂಘಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor