ಕುರೇಕುಪ್ಪದ 23 ವಾರ್ಡ್ಗಳಿಗೂ ಪಟ್ಟಣದ ಹೆಸರೇ ಇರಲಿ: ಕರವೇ ಒತ್ತಾಯ
ಸಂಡೂರು / ಬಳ್ಳಾರಿ : ತಾಲೂಕಿನ ಕುರೇಕುಪ್ಪ ಪಟ್ಟಣದ 23 ವಾರ್ಡ್ಗಳ ಅಧಿಕೃತ ಗುರುತನ್ನು “ಕುರೇಕುಪ್ಪ” ಎಂದು ಏಕರೂಪಗೊಳಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಕುರೇಕುಪ್ಪ ಘಟಕ ಒತ್ತಾಯಿಸಿದೆ.
ಈ ಕುರಿತು ಬಳ್ಳಾರಿ ಜಿಲ್ಲಾಧಿಕಾರಿಗಳು, ಸಹಾಯಕ ಆಯುಕ್ತರು (ಎಸಿ), ಜಿಲ್ಲಾ ನಗರಾಭಿವೃದ್ಧಿ ಕೋಶದ (DUDC) ಯೋಜನಾ ನಿರ್ದೇಶಕರು ಹಾಗೂ ಕುರೇಕುಪ್ಪ ಪುರಸಭೆಯ ಮುಖ್ಯಾಧಿಕಾರಿಗಳಿಗೆ ಪ್ರತ್ಯೇಕವಾಗಿ ಮನವಿ ಸಲ್ಲಿಸಲಾಗಿದೆ. ಆದರೆ ಮನವಿ ಸಲ್ಲಿಸಿ ಸುಮಾರು ನಾಲ್ಕು ತಿಂಗಳು ಕಳೆದರೂ ಯಾವುದೇ ಸ್ಪಷ್ಟವಾದ ಅಂತಿಮ ಕ್ರಮ ಕೈಗೊಂಡಿಲ್ಲ ಎಂದು ಸಂಘಟನೆಯ ಪದಾಧಿಕಾರಿಗಳು ತಿಳಿಸಿದ್ದಾರೆ.
ಕುರೇಕುಪ್ಪ ಪಟ್ಟಣದ ವ್ಯಾಪ್ತಿಯಲ್ಲಿ ವಿಜಯ ವಿಠಲ ನಗರ, ಶಂಕರಗುಡ್ಡ ಕಾಲೋನಿ, ಜಿಂದಾಲ್ ಟೌನ್ಶಿಪ್ ಸೇರಿದಂತೆ ವಿವಿಧ ಸ್ಥಳೀಯ ಪ್ರದೇಶಗಳ ಹೆಸರುಗಳು ಇರಬಹುದು. ಆದರೆ ಪಟ್ಟಣದ ಅಧಿಕೃತ ಗುರುತು ಮಾತ್ರ “ಕುರೇಕುಪ್ಪ” ಎಂದೇ ಇರಬೇಕು ಎಂಬುದು ಕರವೇಯ ಪ್ರಮುಖ ಬೇಡಿಕೆಯಾಗಿದೆ.
ಪುರಸಭೆಯ 23 ವಾರ್ಡ್ಗಳನ್ನು ಅವುಗಳ ಸಂಖ್ಯೆಗಳ ಮೂಲಕ ಗುರುತಿಸಬೇಕು. ಕುರೇಕುಪ್ಪ ಪಟ್ಟಣದ ವಾರ್ಡ್ಗಳಿಗೆ ವಿವಿಧ ಹೆಸರುಗಳ ಮೂಲಕ ಮತ್ತು “ತೋರಣಗಲ್ಲು ಆರ್ಎಸ್” ಎಂಬ ಹೆಸರನ್ನು ಬಳಸಬಾರದು. ಬದಲಾಗಿ ಎಲ್ಲ ವಾರ್ಡ್ಗಳ ಅಧಿಕೃತ ದಾಖಲಾತಿಗಳಲ್ಲಿಯೂ ಕುರೇಕುಪ್ಪ ಪಟ್ಟಣದ ಹೆಸರನ್ನು ಏಕರೂಪವಾಗಿ ನಮೂದಿಸಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆ ಆಗ್ರಹಿಸಿದೆ.
ಪಟ್ಟಣದ ಹೆಸರು ಮತ್ತು ಗುರುತನ್ನು ಉಳಿಸುವ ನಿಟ್ಟಿನಲ್ಲಿ ಸಲ್ಲಿಸಿರುವ ಮನವಿಯನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ, ಅಗತ್ಯ ಪರಿಶೀಲನೆ ನಡೆಸಿ ಶೀಘ್ರದಲ್ಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕರವೇ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕುರೇಕುಪ್ಪ ಘಟಕದ ಅಧ್ಯಕ್ಷ ಮಲ್ಲಯ್ಯ, ಪ್ರಧಾನ ಕಾರ್ಯದರ್ಶಿ ಹೊನ್ನೂರು ಸ್ವಾಮಿ ಸೇರಿದಂತೆ ಇತರರು ಉಪಸ್ಥಿತರಿದ್ದರು.