ಸಂಡೂರಿನಲ್ಲಿ ಎಸ್‌ಐಆರ್ ಪ್ರಕ್ರಿಯೆಗೆ ವೇಗ: ಮನೆಮನೆಗೆ ತೆರಳಿ ನಮೂನೆ ವಿತರಣೆ
ಬಿಎಲ್‌ಒಗಳಿಂದ ಮತದಾರರಿಗೆ ಜಾಗೃತಿ; ಆನ್‌ಲೈನ್ ದಾಖಲೀಕರಣಕ್ಕೂ ಉತ್ತಮ ಸ್ಪಂದನೆ
ಸಂಡೂರು, ಜು.1: ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನಲ್ಲಿ ವಿಶೇಷ ಮತದಾರರ ಪಟ್ಟಿಯ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಚುರುಕುಗೊಂಡಿದ್ದು, ಮತದಾರರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಮನೆಮನೆಗೆ ಭೇಟಿ ನೀಡಿ ಎನ್ಯುಮರೇಷನ್ ನಮೂನೆಗಳನ್ನು ವಿತರಿಸುವುದರೊಂದಿಗೆ ಮತದಾರರಿಗೆ ಅಗತ್ಯ ಮಾಹಿತಿ ನೀಡಿ ಜಾಗೃತಿ ಮೂಡಿಸುತ್ತಿದ್ದಾರೆ.
ಬುಧವಾರ ನಿಡಗುರ್ತಿ ಗ್ರಾಮದಲ್ಲಿ ಬಿಎಲ್‌ಒ ಶಶಿಧರ್ ನೇತೃತ್ವದಲ್ಲಿ ಮನೆಮನೆಗೆ ಭೇಟಿ ನೀಡಿ ಎಸ್‌ಐಆರ್ ಪ್ರಕ್ರಿಯೆ ನಡೆಸಲಾಯಿತು. ಮತದಾರರಿಗೆ ಎನ್ಯುಮರೇಷನ್ ನಮೂನೆಗಳನ್ನು ವಿತರಿಸಿ, ಅವುಗಳನ್ನು ಸರಿಯಾಗಿ ಭರ್ತಿ ಮಾಡುವ ವಿಧಾನ ಹಾಗೂ ಸಲ್ಲಿಸಬೇಕಾದ ಅಗತ್ಯ ದಾಖಲೆಗಳ ಕುರಿತು ಮಾಹಿತಿ ನೀಡಲಾಯಿತು.
ಇದೇ ವೇಳೆ ಆನ್‌ಲೈನ್ ದಾಖಲೀಕರಣ ಕಾರ್ಯವೂ ಸುಗಮವಾಗಿ ನಡೆಯುತ್ತಿದ್ದು, ಮತದಾರರು ಸ್ವಯಂಪ್ರೇರಿತವಾಗಿ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಎಸ್‌ಐಆರ್ ಪ್ರಕ್ರಿಯೆಗೆ ಸಹಕರಿಸುತ್ತಿದ್ದಾರೆ. ಅಧಿಕಾರಿಗಳ ಮಾರ್ಗದರ್ಶನದಿಂದ ಮತದಾರರ ಪಟ್ಟಿಯನ್ನು ನಿಖರ ಹಾಗೂ ಪಾರದರ್ಶಕವಾಗಿ ಸಿದ್ಧಪಡಿಸುವ ಕಾರ್ಯ ವೇಗವಾಗಿ ಸಾಗುತ್ತಿದೆ.
ತಾಲೂಕಿನ ವಿವಿಧ ಗ್ರಾಮಗಳಲ್ಲಿಯೂ ಬಿಎಲ್‌ಒಗಳು ಮನೆಮನೆಗೆ ತೆರಳಿ ಮತದಾರರ ಪರಿಶೀಲನೆ, ನೋಂದಣಿ ಹಾಗೂ ಮಾಹಿತಿ ಸಂಗ್ರಹ ಕಾರ್ಯವನ್ನು ನಡೆಸುತ್ತಿದ್ದು, ಚುನಾವಣಾ ಆಯೋಗದ ನಿರ್ದೇಶನದಂತೆ ಎಸ್‌ಐಆರ್ ಪ್ರಕ್ರಿಯೆ ಯಶಸ್ವಿಯಾಗಿ ಮುಂದುವರಿದಿದೆ.