ಸಿರುಗುಪ್ಪ : ಬಸ್ ಸೌಕರ್ಯ ಕಲ್ಪಿಸುವಂತೆ ವಿದ್ಯಾರ್ಥಿಗಳಿಂದ ಜಿಲ್ಲಾಧಿಕಾರಿಗಳಿಗೆ ಮನವಿ
ಸಿರುಗುಪ್ಪ : ತಾಲೂಕಿನ ಸಿದ್ದರಾಂಪುರ ಗ್ರಾಮದಲ್ಲಿ ಶುಕ್ರವಾರ ಬರ ಅಧ್ಯಯನ ಸಮೀಕ್ಷೆಗೆ ಆಗಮಿಸಿದ್ದ ಜಿಲ್ಲಾಧಿಕಾರಿ ಕೆ. ನಾಗೇಂದ್ರ ಪ್ರಸಾದ್ ಅವರಿಗೆ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಬಸ್ ಸೌಕರ್ಯ ಕಲ್ಪಿಸುವಂತೆ ಮನವಿ ಮಾಡಿದರು.
ಸಂಜೆ ಶಾಲೆ ಬಿಡುವ ವೇಳೆಯಲ್ಲಿ ಸಿರಿಗೇರಿ–ಬಳ್ಳಾರಿ ಬಸ್ ಕೊಂಚಗೇರಿ, ದಾಸಾಪುರ ಮಾರ್ಗವಾಗಿ ಸಂಚರಿಸದೆ ಸಿರಿಗೇರಿ ಕ್ರಾಸ್ ಮೂಲಕ ನೇರವಾಗಿ ಬಳ್ಳಾರಿಗೆ ತೆರಳುತ್ತಿದೆ. ಇದರಿಂದ ಕೊಂಚಗೇರಿ, ದಾಸಾಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳು ಶಾಲೆಯಿಂದ ಮನೆಗೆ ತೆರಳಲು ನಿತ್ಯವೂ ಕಾಲ್ನಡಿಗೆಯಲ್ಲಿ ಸಾಗಬೇಕಾಗಿದೆ ಎಂದು ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಗಮನಕ್ಕೆ ತಂದರು.
ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ, ಕೂಡಲೇ ಕೆಕೆಆರ್‌ಟಿಸಿಯ ಬಳ್ಳಾರಿ ವಿಭಾಗೀಯ ಅಧಿಕಾರಿಗೆ ದೂರವಾಣಿ ಮೂಲಕ ಸೂಚನೆ ನೀಡಿ, ಸಿರಿಗೇರಿ–ಬಳ್ಳಾರಿ ಬಸ್ ಕಡ್ಡಾಯವಾಗಿ ಕೊಂಚಗೇರಿ–ದಾಸಾಪುರ ಮಾರ್ಗವಾಗಿ ಸಂಚರಿಸುವಂತೆ ನಿರ್ದೇಶಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್ ಹ್ಯಾರಿಸ್ ಸುಮೇರ್, ತಹಶೀಲ್ದಾರ್ ಗೌಸಿಯಾ ಬೇಗಂ ಇದ್ದರು.