ಸಂಡೂರು/ ಬಳ್ಳಾರಿ: ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್ ನಿಷೇಧ ಮತ್ತು ಪುನರ್ವಸತಿ ಕಾಯ್ದೆ–2013ರ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಸಂಡೂರು ಪುರಸಭೆ ವತಿಯಿಂದ ಪಟ್ಟಣದ ಬಸ್ ನಿಲ್ದಾಣದ ಮುಂಭಾಗದಲ್ಲಿ ಹಮ್ಮಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಕಾಯ್ದೆಯ ಕುರಿತು ಮಾಹಿತಿ ನೀಡಿದ ಸಿಬ್ಬಂದಿ, ಸೂಕ್ತ ವೈಯಕ್ತಿಕ ಸುರಕ್ಷತಾ ಸಾಧನಗಳಿಲ್ಲದೆ (PPE Kits) ಯಾವುದೇ ವ್ಯಕ್ತಿಯೂ ಮ್ಯಾನ್‌ಹೋಲ್, ಸೆಪ್ಟಿಕ್ ಟ್ಯಾಂಕ್ ಹಾಗೂ ಒಳಚರಂಡಿ ಗುಂಡಿಗಳಿಗೆ ಇಳಿದು ಸ್ವಚ್ಛತಾ ಕಾರ್ಯ ಕೈಗೊಳ್ಳುವುದು ಕಾನೂನುಬಾಹಿರವಾಗಿದೆ ಎಂದು ತಿಳಿಸಿದರು.

ಮ್ಯಾನ್‌ಹೋಲ್ ಮತ್ತು ಸೆಪ್ಟಿಕ್ ಟ್ಯಾಂಕ್‌ಗಳ ಸ್ವಚ್ಛತಾ ಕಾರ್ಯವನ್ನು ಕೈಯಿಂದ ಮಾಡಿಸದೆ, ಸೂಕ್ತ ಯಂತ್ರೋಪಕರಣಗಳ ಮೂಲಕವೇ ನಿರ್ವಹಿಸಬೇಕು. ಪುರಸಭೆ ಅಥವಾ ಪುರಸಭೆಯಿಂದ ಅಧಿಕೃತವಾಗಿ ನಿಯೋಜಿಸಲ್ಪಟ್ಟ ಏಜೆನ್ಸಿಗಳ ಮೂಲಕ ಮಾತ್ರ ಇಂತಹ ಕಾರ್ಯಗಳನ್ನು ಕೈಗೊಳ್ಳಬೇಕು. ಸಾರ್ವಜನಿಕರು ತಮ್ಮ ಮನೆ ಹಾಗೂ ಕಟ್ಟಡಗಳ ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಅನಧಿಕೃತ ವ್ಯಕ್ತಿಗಳನ್ನು ಕೆಲಸಕ್ಕೆ ನಿಯೋಜಿಸಬಾರದು ಎಂದು ಮನವಿ ಮಾಡಿದರು.

ಸ್ವಚ್ಛತಾ ಕಾರ್ಮಿಕರ ಜೀವ ರಕ್ಷಣೆ, ಸುರಕ್ಷತೆ ಹಾಗೂ ಘನತೆಯನ್ನು ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಕಾಯ್ದೆಯ ನಿಯಮಗಳನ್ನು ಪಾಲಿಸುವ ಮೂಲಕ ಅಪಾಯಕಾರಿ ಕೈಯಾರೆ ಸ್ವಚ್ಛತಾ ಪದ್ಧತಿಯನ್ನು ಸಂಪೂರ್ಣವಾಗಿ ತಡೆಗಟ್ಟಲು ಸಾರ್ವಜನಿಕರು ಸಹಕರಿಸಬೇಕು ಎಂದು ಜಾಗೃತಿ ಮೂಡಿಸಲಾಯಿತು.

ಕಾರ್ಯಕ್ರಮದಲ್ಲಿ ಪರಿಸರ ಅಭಿಯಂತರರಾದ ಶ್ರೀಮತಿ ಅನ್ನಪೂರ್ಣ ಹಾಗೂ ಕಮ್ಯೂನಿಟಿ ಮೊಬಿಲೈಸರ್‌ಗಳಾದ ಕಾವ್ಯಾಂಜಲಿ, ಚೈತ್ರ, ಮಾರೆಕ್ಕ, ದೀನಾ ಮತ್ತು ಅನಿತಾ ಉಪಸ್ಥಿತರಿದ್ದು, ಸಾರ್ವಜನಿಕರಿಗೆ ಕಾಯ್ದೆಯ ಕುರಿತು ಅರಿವು ಮೂಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor