×
Ad

ಸವಾಲುಗಳಿಗೆ ಹೆದರುವುದಿಲ್ಲ, ಎಲ್ಲದಕ್ಕೂ ಶೀಘ್ರವೇ ಉತ್ತರ ನೀಡುವೆ : ಶಾಸಕ ನಾರಾ ಭರತ್ ರೆಡ್ಡಿ

Update: 2026-01-21 19:11 IST

ಬಳ್ಳಾರಿ : ವಿರೋಧ ಪಕ್ಷಗಳ ಸವಾಲುಗಳಿಗೆ ನಾನು ಹೆದರುವುದಿಲ್ಲ. ಸದ್ಯದಲ್ಲೇ ನಡೆಯಲಿರುವ ವಾಲ್ಮೀಕಿ ಪುತ್ತಳಿ ಪ್ರತಿಷ್ಠಾಪನಾ ಕಾರ್ಯಕ್ರಮದ ಬಳಿಕ ಪ್ರತಿ ಆರೋಪಕ್ಕೂ ತಕ್ಕ ಉತ್ತರ ನೀಡುತ್ತೇನೆ ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ತಿಳಿಸಿದ್ದಾರೆ.

ನಗರದ 2ನೇ ವಾರ್ಡ್‌ನಲ್ಲಿ ಮಂಗಳವಾರ ಜನರ ಕುಂದುಕೊರತೆಗಳನ್ನು ಆಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

2ನೇ ವಾರ್ಡ್‌ನ ಅಭಿವೃದ್ಧಿಗಾಗಿ ಈಗಾಗಲೇ 3 ರಿಂದ 3.5 ಕೋಟಿ ರೂಪಾಯಿ ಅನುದಾನ ನಿಗದಿಪಡಿಸಲಾಗಿದೆ. ಇಲ್ಲಿನ ಒಳಚರಂಡಿ ಸೇರಿದಂತೆ ಹಲವು ಸಮಸ್ಯೆಗಳನ್ನು ಖುದ್ದಾಗಿ ಪರಿಶೀಲಿಸುತ್ತಿದ್ದೇನೆ. ಜನರ ಸಲಹೆಗಳ ಮೇರೆಗೆ ಯಾವ ರೀತಿ ಯೋಜನೆ ಜಾರಿಗೆ ತರಬೇಕು ಎಂಬುದನ್ನು ತೀರ್ಮಾನಿಸಲಾಗುವುದು ಎಂದು ಅವರು ತಿಳಿಸಿದರು.

ಬರುವ ಬಜೆಟ್‌ನಲ್ಲಿ ಬಳ್ಳಾರಿಗೆ ಹೊಸ ಕಾನೂನು ಕಾಲೇಜು ಹಾಗೂ ಕಂಪ್ಲಿ-ಬಳ್ಳಾರಿ ನಡುವಿನ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಮಂಜೂರು ಮಾಡುವಂತೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿರುವುದಾಗಿ ಅವರು ವಿವರಿಸಿದರು.

ಶಾಸಕರ ಬೆಂಬಲಿಗರು ಡ್ರಗ್ಸ್ ದಂದೆಯಲ್ಲಿ ತೊಡಗಿದ್ದಾರೆ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಅವರು ಹಾಕಿದ ಸವಾಲುಗಳು ನನಗೆ ಲೆಕ್ಕಕ್ಕಿಲ್ಲ. ಸಮಯ ಬಂದಾಗ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡುತ್ತೇನೆ ಎಂದರು.

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕುರಿತು ಮಾತನಾಡಿದ ಶಾಸಕರು, ಜಿಲ್ಲೆಯ ಶಾಸಕರೆಲ್ಲರೂ ಒತ್ತಾಯಿಸಿ ಸಮ್ಮೇಳನವನ್ನು ಬಳ್ಳಾರಿಗೆ ತಂದಿದ್ದೇವೆ. ಕಸಾಪ ಅಧ್ಯಕ್ಷರ ಮೇಲಿನ ಆರೋಪ ಹಾಗೂ ನ್ಯಾಯಾಲಯದ ಪ್ರಕ್ರಿಯೆಗಳಿಂದಾಗಿ ವಿಳಂಬವಾಗಿದೆಯೇ ಹೊರತು, ಸಮ್ಮೇಳನ ಬಳ್ಳಾರಿಯಲ್ಲೇ ನಡೆಯುವುದು ಶತಃಸಿದ್ಧ ಎಂದು  ಹೇಳಿದರು.







Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News