SIR ಫಾರ್ಮ್ 7 ದುರ್ಬಳಕೆ ಆರೋಪ: ಬೆಂಗಳೂರಿನಲ್ಲಿ ಮತ್ತೊಂದು ಪ್ರಕರಣ ದಾಖಲು
ಸಾಂದರ್ಭಿಕ ಚಿತ್ರ (PTI)
ಬೆಂಗಳೂರು: SIR ಫಾರ್ಮ್ 7 ರ ದುರ್ಬಳಕೆ ಸಂಬಂಧ ರಾಜಧಾನಿ ಬೆಂಗಳೂರಿನ ಯಶವಂತಪುರ ಠಾಣೆಯಲ್ಲಿ ಮತ್ತೊಂದು FIR ದಾಖಲಾಗಿದೆ. ಎರಡು ದಿನಗಳ ಹಿಂದೆ ಇದೇ ವಿಚಾರಕ್ಕೆ ನಗರದ ವೈಯಾಲಿ ಕಾವಲ್ ಠಾಣೆಯಲ್ಲಿ ಕೂಡ ಪ್ರಕರಣ ದಾಖಲಾಗಿತ್ತು. ಈಗ ಎರಡನೇ FIR ಯಶವಂತಪುರ ಠಾಣೆಯಲ್ಲಿ ದಾಖಲಾಗಿದೆ.
ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಪಾರಾಜಿತ ಅಭ್ಯರ್ಥಿ ಅನೂಪ್ ಅಯ್ಯಂಗಾರ್ ದೂರು ನೀಡಿದ್ದು, ದೂರಿನಲ್ಲಿ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ವಾರ್ಡ್ ನಂ 45 ಮತಗಟ್ಟೆ ಸಂಖ್ಯೆ 68 ರಲ್ಲಿ ಸುಭೇದಾರ್ ಪಾಳ್ಯದ 136 ಅರ್ಜಿಗಳಲ್ಲಿ ಇರುವ ಮತದಾರರು ಗೈರು ಹಾಜರಾಗಿದ್ದಾರೆ ಎಂದು ನಕಲಿ ದಾಖಲೆಗಳನ್ನು ಸಲ್ಲಿಸಿದ್ದಾರೆ. ಈ ಕೃತ್ಯವನ್ನ BLA 2 ಆಗಿದ್ದ ದೀಪಕ್ ಸಿಂಗ್ ಅವರೇ ಮಾಡಿದ್ದಾರೆ. ಈ ಅರ್ಜಿಗಳಲ್ಲಿಯ ಸಹಿಗಳು ಹಾಗೂ ಮಾಹಿತಿ ಏರುಪೇರಿನಿಂದ ಕೂಡಿವೆ. ಒಂದು ನಿರ್ದಿಷ್ಟ ಸಮುದಾಯವನ್ನು ಗುರಿ ಮಾಡಿ ಅವರನ್ನು ಮತದಾರರ ಪಟ್ಟಿಯಿಂದ ತೆಗೆಯಲು ಸಂಚು ಮಾಡಿದ್ದಾರೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.
ಹೀಗಾಗಿ ಯಶವಂತಪುರ ಠಾಣೆಯಲ್ಲಿ ಭಾರತೀಯ ನೀತಿ ಸಂಹಿತೆಯ ವಿವಿಧ ಸೆಕ್ಷನ್ ಗಳ ಅಡಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ