ಬೆಂಗಳೂರು: “ಕರಾವಳಿ ಹಾಗೂ ಮಲೆನಾಡಿನ ಜನರು ಉದ್ಯೋಗಕ್ಕಾಗಿ ಬೇರೆ ಕಡೆ ಹೋಗುವುದಕ್ಕಿಂತ, ನಿಮ್ಮಲ್ಲಿರುವ ಪ್ರಾಕೃತಿಕ ಸಂಪತ್ತನ್ನು ಬಳಸಿಕೊಂಡು ನಿಮ್ಮ ಊರುಗಳಲ್ಲೇ ಉದ್ಯಮಗಳನ್ನು ಆರಂಭಿಸಿ. ನಿಮಗೆ ಶಕ್ತಿ ತುಂಬುವ ಉದ್ದೇಶದಿಂದ ಕಾಂಗ್ರೆಸ್ ಸರ್ಕಾರ ಕರಾವಳಿ ಹಾಗೂ ಮಲೆನಾಡು ಪ್ರವಾಸೋದ್ಯಮ ನೀತಿ ರೂಪಿಸಿದೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಕರೆ ನೀಡಿದರು.

ಬೆಂಗಳೂರಿನ ಉಳ್ಳಾಲದಲ್ಲಿರುವ ಕೊಡಗು ಗೌಡ ಸಮಾಜದ ಸಭಾಂಗಣದಲ್ಲಿ ಭಾನುವಾರ ನಡೆದ ಕೈಲ್ ಮುಹೂರ್ತ ಜಂಬರ 2026 ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಮಾತನಾಡಿದರು.

“ನೀವೆಲ್ಲರೂ ಕೊಡಗಿನಿಂದ ಬಂದು ಬೆಂಗಳೂರಿನಲ್ಲಿ ವಾಸಿಸುತ್ತಿದ್ದೀರಿ. ನೀವು ನಿಮ್ಮ ಮೂಲ ಮರೆತರೆ ಯಶಸ್ಸು ಸಿಗುವುದಿಲ್ಲ. ಮರಕ್ಕೆ ಬೇರು ಎಷ್ಟು ಮುಖ್ಯವೋ, ಮನುಷ್ಯನಿಗೆ ನಂಬಿಕೆ ಮುಖ್ಯ. ನಿಮ್ಮ ಸಂಸ್ಕೃತಿ, ಊರು, ಪರಂಪರೆ, ಸಮಾಜ ಎಲ್ಲವನ್ನು ಒಗ್ಗೂಡಿಸಿ ಇಲ್ಲಿ ಇಂತಹ ಭವ್ಯ ಕಟ್ಟ ನಿರ್ಮಿಸಿ, ನೀವೆಲ್ಲರೂ ಸೇರುತ್ತಿರುವುದು ಬಹಳ ಸಂತೋಷ ತಂದಿದೆ. ಇದಕ್ಕೆ ಶ್ರಮಿಸಿ, ಪ್ರೋತ್ಸಾಹ ನೀಡುತ್ತಿರುವವರಿಗೆ ಅಭಿನಂದನೆ ಸಲ್ಲಿಸುತ್ತೇನೆ” ಎಂದರು.

ಕೊಡಗು ಶೌರ್ಯ, ಸಾಂಸ್ಕೃತಿಕ, ಧಾರ್ಮಿಕ ಕ್ಷೇತ್ರದಲ್ಲಿ ಇತಿಹಾಸ ಹೊಂದಿದೆ

“ಕೊಡಗು ಶೌರ್ಯ, ಸಾಂಸ್ಕೃತಿಕ, ಧಾರ್ಮಿಕ ಕ್ಷೇತ್ರದಲ್ಲಿ ಇತಿಹಾಸ ಹೊಂದಿದೆ. ಪ್ರತಿ ಮನೆಯಲ್ಲಿ ವೀರರನ್ನು ತಯಾರು ಮಾಡಿರುವ ಇತಿಹಾಸವನ್ನು ಮರೆಯಲು ಸಾಧ್ಯವಿಲ್ಲ. ನಮ್ಮೆಲ್ಲರ ತಾಯಿ ಕಾವೇರಿ ಇಲ್ಲೇ ಹುಟ್ಟಿ, ಪಾಂಡಿಚೆರಿವರೆಗೂ ಈ ತಾಯಿ ಮೇಲೆ ಅವಲಂಬಿತವಾಗಿದ್ದೇವೆ. ಈ ಬಾರಿ ಭೀಕರ ಬರಗಾಲವಾಗಿದೆ. ಮಲೆನಾಡಿನಲ್ಲೇ ಈ ವರ್ಷ ಮಳೆ ಇಲ್ಲವಾಗಿದೆ. ಕೆರೆ, ಕೆಆರ್ ಎಸ್ ಅಣೆಕಟ್ಟು ತುಂಬುತ್ತದೆ ಎಂದು ಕಾತುರದಿಂದ ಕಾಯುತ್ತಿದ್ದೇನೆ” ಎಂದು ತಿಳಿಸಿದರು.

“ನಾನು ಪ್ರತಿ ವರ್ಷ ಕಾವೇರಿ ಆರತಿ ನಡೆಸಲು ತೀರ್ಮಾನಿಸಿದ್ದು, ದಸರಾ ಸಂದರ್ಭದಲ್ಲಿ ಈ ಬಾರಿಯೂ ಆಚರಿಸಲು ನಿರ್ದೇಶನ ನೀಡಲಾಗಿದೆ. ಕೊಡಗು ಜಿಲ್ಲೆ ಕರ್ನಾಟಕದ ಕಾಶ್ಮೀರ. ಇಡೀ ವಿಶ್ವ ಈ ಭಾಗಕ್ಕೆ ಆಕರ್ಷಿತವಾಗಿದೆ. ನಿಮ್ಮ ಪರಂಪರೆ ಉಳಿಸಿಕೊಳ್ಳಿ. ಇದು ಮನುಷ್ಯತ್ವದ ದೊಡ್ಡ ಗುಣ. ನನ್ನದೇ ಆದ ಅನುಭವದಲ್ಲಿ ಹಳ್ಳಿಯಿಂದ ನಗರಕ್ಕೆ ವಲಸೆ ಬರುವವರು ಶಿಕ್ಷಣ, ವಿದ್ಯಾಭ್ಯಾಸ ಹಾಗೂ ಬದುಕಿಗೆ. ಹಳ್ಳಿಗಳಲ್ಲೇ ಶಿಕ್ಷಣ ಹಾಗೂ ಉದ್ಯೋಗ ಸಿಕ್ಕಿದ್ದರೆ ನೀವು ಇಲ್ಲಿಗೆ ಬರುತ್ತಿರಲಿಲ್ಲ. ನೀವು ಸಂಘಟಿತರಾಗಿ ಹಳ್ಳಿ ಜನರಿಗೆ ಒಳ್ಳೆಯದಾಗಬೇಕು ಎಂದು ಪ್ರಯತ್ನಿಸುತ್ತಿದ್ದು, ನನಗೆ ಅನೇಕ ಬೇಡಿಕೆ ಇಟ್ಟಿದ್ದೀರಿ” ಎಂದರು.

ನಿಮ್ಮ ಊರುಗಳಲ್ಲೇ ಉದ್ಯಮ ಕಟ್ಟಿಕೊಳ್ಳಿ

“ನಾವು ಇತ್ತೀಚೆಗೆ ಮಂಗಳೂರಿನಲ್ಲಿ ವಿಶೇಷ ಸಚಿವ ಸಂಪುಟ ಸಭೆ ನಡೆಸಿದೆ. ಅಲ್ಲಿ ಮಲೆನಾಡು ಹಾಗೂ ಕರಾವಳಿ ಭಾಗದ ಪ್ರವಾಸೋದ್ಯಮಕ್ಕೆ ಪ್ರತೇಕ ನೀತಿ ರೂಪಿಸಲಾಗಿದೆ. ಈ ಭಾಗದ ಜನರ ಪ್ರತಿಭೆ ಗುರುತಿಸುವಂತಾಗಬೇಕು. ಈ ಜಿಲ್ಲೆಯ ಜನ ಕ್ರೀಡೆ, ರಕ್ಷಣಾ ಕ್ಷೇತ್ರದಲ್ಲಿ ಹೆಜ್ಜೆಗುರುತು ಮೂಡಿಸಿದ್ದಾರೆ. ಕರಾವಳಿ ಭಾಗದಲ್ಲಿ ಶಿಕ್ಷಣ ಸಂಸ್ಥೆಗಳು,. ಬ್ಯಾಂಕುಗಳು ನಿರ್ಮಾಣವಾಗಿದೆ. ಈಗ ಅವುಗಳು ನಶಿಸಿವೆ. ಇವುಗಳನ್ನು ಕಾಪಾಡುವುದು ನಮ್ಮ ಕರ್ತವ್ಯ. 327 ಕಿ.ಮೀ ಉದ್ದದ ಕರಾವಳಿ ಭಾಗವನ್ನು ಗೋವಾ ಹಾಗೂ ಕೇರಳದಂತೆ ಪ್ರವಾಸೋದ್ಯಮಕ್ಕೆ ಬಳಸಿದಂತೆ ಬಳಸಲು ತೀರ್ಮಾನಿಸಲಾಗಿದೆ” ಎಂದರು.

“ಮಂಗಳೂರು, ಉಡುಪಿ, ಕಾರವಾರ ನೋಡಿದರೆ ಒಂದು ಪಂಚತಾರಾ ಹೊಟೇಲ್ ಇಲ್ಲ. ಇದು ಯಾಕೆ ಎಂದು ರಾಜಕಾರಣದ ಬಗ್ಗೆ ಮಾತನಾಡಲು ಬಯಸುವುದಿಲ್ಲ. ನಮ್ಮ ಅವಧಿಯಲ್ಲಿ ಏನಾದರೂ ಕೊಡುಗೆ ಬಿಟ್ಟುಹೋಗಬೇಕು ಎಂಬುದು ನಮ್ಮ ಬಯಕೆ. ನಾವು ರಾಜಕಾರಣದಲ್ಲಿ ಶಾಶ್ವತವಲ್ಲ. ದೇವರು ವರ, ಶಾಪ ನೀಡುವುದಿಲ್ಲ. ಕೇವಲ ಅವಕಾಶ ನೀಡುತ್ತಾನೆ. ಸಿಕ್ಕ ಅವಕಾಶದಲ್ಲಿ ನಾವು ಏನು ಮಾಡುತ್ತೇವೆ ಎಂಬುದು ಮುಖ್ಯ” ಎಂದು ತಿಳಿಸಿದರು.

 ಉದ್ಯಮಿಗಳೊಂದಿಗೆ ಸಧ್ಯದಲ್ಲೇ ಮಂಗಳೂರಿನಲ್ಲಿ ಸಭೆ

“ನಾನು ಮತ್ತೆ ಮಂಗಳೂರಿಗೆ ಹೋಗಿ, ಎಲ್ಲ ಉದ್ಯಮಿಗಳ ಜತೆ ಕೂತು ಚರ್ಚೆ ಮಾಡುತ್ತೇವೆ. ನಿಮಗೂ ಆಹ್ವಾನ ನೀಡುತ್ತೇನೆ. ನೀವು ಭಾಗವಹಿಸಿ. ಹೊರಗಿನವರು ಇಲ್ಲಿ ಬಂದು ಉದ್ಯಮ ಆರಂಭಿಸುವುದಕ್ಕಿಂತ, ನೀವೇ ಉದ್ಯಮ ಆರಂಭಿಸಿ, ಆಸ್ತಿಯನ್ನಾಗಿ ಮಾಡಿ. ಇದಕ್ಕೆ ಶಕ್ತಿ ತುಂಬುವ ಪ್ರಯತ್ನ ಮಾಡುತ್ತಿದ್ದೇನೆ” ಎಂದು ಮಾಹಿತಿ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor