Bengaluru | ಬೈಕ್ ಟ್ಯಾಕ್ಸಿಯಾಗಿ ಬಳಕೆಯಾಗುತ್ತಿದ್ದ 70 ದ್ವಿಚಕ್ರ ವಾಹನಗಳು ಜಪ್ತಿ
ಸಾಂದರ್ಭಿಕ ಚಿತ್ರ | PC : Gemini AI
ಬೆಂಗಳೂರು : ನಗರದಲ್ಲಿ ಮೊಬೈಲ್ ಅಪ್ಲಿಕೇಷನ್ ಮೂಲಕ ಬಾಡಿಗೆ ಸಂಚಾರಕ್ಕೆ(ಬೈಕ್ ಟ್ಯಾಕ್ಸಿ) ಬಳಸುತ್ತಿದ್ದ 70 ದ್ವಿಚಕ್ರ ವಾಹನಗಳನ್ನು ಸಾರಿಗೆ ಇಲಾಖೆ ಅಧಿಕಾರಿಗಳು (ಆರ್‌ಟಿಓ) ಬುಧವಾರದಂದು ಜಪ್ತಿ ಮಾಡುತ್ತಿದ್ದಾರೆ.
ರಾಜಾಜಿನಗರ ವಿಭಾಗದಲ್ಲಿ 12, ಬೆಂಗಳೂರು ಪಶ್ಚಿಮ ವ್ಯಾಪ್ತಿಯಲ್ಲಿ 10, ಉತ್ತರ ವಿಭಾಗದಲ್ಲಿ 8 ದ್ವಿಚಕ್ರ ವಾಹನಗಳನ್ನ ಜಪ್ತಿ ಮಾಡಲಾಗಿದೆ. ಯಲಹಂಕದ ಸಿಂಗನಾಯಕನಹಳ್ಳಿ ಆರ್‌ಟಿಒ ವ್ಯಾಪ್ತಿಯಲ್ಲಿ ಒಂದೇ ದಿನ ಸುಮಾರು 40ಕ್ಕೂ ಹೆಚ್ಚು ಬೈಕ್‍ಗಳನ್ನು ಜಪ್ತಿ ಮಾಡಲಾಗಿದೆ.
ಕಾನೂನುಬಾಹಿರವಾಗಿ ಬೈಕ್ ಟ್ಯಾಕ್ಸಿ ನಡೆಸುತ್ತಿರುವವರ ವಿರುದ್ಧ ವಾಹನ ಜಪ್ತಿ ಮಾತ್ರವಲ್ಲ, ಚಾಲಕರ ಪರವಾನಗಿ(ಡಿಎಲ್) ಹಾಗೂ ವಾಹನದ ಆರ್‌ಸಿ ಅಮಾನತು ಮಾಡುವ ಕ್ರಮವೂ ಕೈಗೊಳ್ಳಲಾಗುತ್ತದೆ ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಸಾರಿಗೆ ಇಲಾಖೆಯ ಈ ವಿಶೇಷ ಕಾರ್ಯಾಚರಣೆ ಇನ್ನೂ ಒಂದು ವಾರ ಮುಂದುವರಿಯಲಿದ್ದು, ನಿಯಮ ಉಲ್ಲಂಘಿಸಿ ಬೈಕ್ ಟ್ಯಾಕ್ಸಿ ಸೇವೆ ನಡೆಸುವವರ ವಿರುದ್ಧ ಕ್ರಮ ಇನ್ನಷ್ಟು ಕಠಿಣವಾಗುವ ಸಾಧ್ಯತೆಯಿದೆ.