ಧರ್ಮ ಗುತ್ತಿಗೆ ಪಡೆದವರು ನಿಮ್ಮ ಬದುಕಿನಲ್ಲಿ ಬದಲಾವಣೆ ತಂದಿದ್ದಾರಾ? : ಸಿಎಂ ಡಿ.ಕೆ.ಶಿವಕುಮಾರ್

ಮುಜರಾಯಿ ದೇವಾಲಯಗಳ ಆರ್ಚಕರ ಆಗಮಿಕರ ಮತ್ತು ನೌಕರರ ಸಂಘದಿಂದ ರಾಜ್ಯ ಮಟ್ಟದ ಸಮಾವೇಶ

Update: 2026-08-05 20:39 IST

ಬೆಂಗಳೂರು : ಧರ್ಮವನ್ನು ಕೆಲವು ಪಕ್ಷದವರು ಗುತ್ತಿಗೆಗೆ ಪಡೆದಿದ್ದಾರೆ. ಅವರ ಸರಕಾರದ ಅವಧಿಯಲ್ಲಿ ನಿಮ್ಮ ಬದುಕಿನಲ್ಲಿ ಬದಲಾವಣೆ ತಂದಿದ್ದರೆ ನಾವು ಪ್ರಶ್ನೆ ಮಾಡುತ್ತಿರಲಿಲ್ಲ. ಕೇವಲ ಶಾಲು ಹಾಕಿಕೊಂಡು ರಾಮ ರಾಮ ಎಂದಾಕ್ಷಣ ಅವರು ಧರ್ಮ ರಕ್ಷಕರೇ? ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪರೋಕ್ಷವಾಗಿ ವಿಪಕ್ಷಗಳ ಮೇಲೆ ಹರಿಹಾಯ್ದಿದ್ದಾರೆ.

ಬುಧವಾರ ನಗರದ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ರಾಜ್ಯ ಮುಜರಾಯಿ ದೇವಾಲಯಗಳ ಆರ್ಚಕರ ಆಗಮಿಕರ ಮತ್ತು ನೌಕರರ ಸಂಘದಿಂದ ನಡೆದ ರಾಜ್ಯ ಮಟ್ಟದ ಬೃಹತ್ ಸಮಾವೇಶ ಹಾಗೂ ಸಚಿವ ರಾಮಲಿಂಗಾರೆಡ್ಡಿ ಅವರ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಾಲು ಹಾಕಿಕೊಂಡು ದೇವರು, ಧರ್ಮ ಎಲ್ಲವೂ ನಮ್ಮದೇ ಎನ್ನುತ್ತಾರೆ. ನಾನು, ರಾಮಲಿಂಗಾರೆಡ್ಡಿ ಹಿಂದೂಗಳಲ್ಲವೇ? ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಅವರು ಹಿಂದೂ ಅಲ್ಲವೇ? ರಾಮ ಮಂದಿರಕ್ಕೆ ನಾವು ನೀವೆಲ್ಲರೂ ಇಟ್ಟಿಗೆ ಕಾಸು ದೇಣಿಗೆ ನೀಡಿದೆವು. ಅದೆಲ್ಲವೂ ಏನಾದವು? ಈಗ ಮರ್ಯಾದೆ ಹೋಗಿಲ್ಲವೇ? ಎಂದು ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು.

ನಿಮಗೆ ಯಾವುದೇ ಕಾರಣಕ್ಕೂ ಅವಮಾನವಾಗಬಾರದು ಎಂದು ನಾವು ತೀರ್ಮಾನಿಸಿ ದೊಡ್ಡ ದೇವಾಲಯಗಳ ಹುಂಡಿ ಬಳಿ ಹಾಗೂ ಅದರ ಹಣ ತೆಗೆಯುವಾಗ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಮುಂದಾಗಿದ್ದೇವೆ. ನಿಮಗೆ ದೇವರ ದುಡ್ಡು ತಿನ್ನುವ ಆಸೆ ಇಲ್ಲ ಎಂದು ನನಗೆ ಗೊತ್ತಿದೆ. ಬಡವರು ಯಾರೂ ಇಂತಹ ಕೆಲಸ ಮಾಡುವುದಿಲ್ಲ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

ನಮ್ಮ ಸರಕಾರ ನುಡಿದಂತೆ ನಡೆದಿದೆ. ಬೇರೆ ಯಾವ ಸರಕಾರಗಳು ಮಾಡದ ಕೆಲಸ ಮಾಡಿ ನಿಮ್ಮ ಹೃದಯ ಗೆದ್ದಿದ್ದೇವೆ. ನೀವುಗಳು ನಿಮ್ಮ ಮನೆ, ದೇವಾಲಯಗಳನ್ನು ಕಾಪಾಡಿಕೊಳ್ಳುವಂತೆ ನಿಮ್ಮ ಸರಕಾರವನ್ನು ಕಾಪಾಡಿಕೊಳ್ಳಿ ಎಂದು ಡಿ.ಕೆ.ಶಿವಕುಮಾರ್ ಅರ್ಚಕರಿಗೆ ಕರೆ ನೀಡಿದರು.

ನೀವೆಲ್ಲರೂ ನಮ್ಮ ಮೇಲೆ ಇಷ್ಟು ವಿಶ್ವಾಸ ಇಟ್ಟಿದ್ದೀರಿ. ಇತಿಹಾಸದಲ್ಲಿ ಯಾರೂ ಮಾಡದ ಕೆಲಸ ರಾಮಲಿಂಗಾರೆಡ್ಡಿ ಅವರು ಮಾಡಿದ್ದಾರೆ ಎಂದು ನೀವೆಲ್ಲರೂ ವಿಶ್ವಾಸ ವ್ಯಕ್ತಪಡಿಸಿದ್ದೀರಿ. ನಮ್ಮ ಸರಕಾರದ ಮೇಲೆ ನಂಬಿಕೆ ಇಟ್ಟಿರುವುದಕ್ಕೆ ನಿಮ್ಮ ಪಾದಗಳಿಗೆ ನಮಿಸುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ನಿಮ್ಮ ನಮ್ಮ ಈ ಬಾಂಧವ್ಯ ನನ್ನನ್ನು ಹಾಗೂ ರಾಮಲಿಂಗಾರೆಡ್ಡಿ ಅವರನ್ನು ಮತ್ತೇ ವಿಧಾನಸೌಧದಲ್ಲಿ ಕೂರಿಸುವಂತೆ ಮಾಡಬೇಕು. ನಾನು ಏನಾದರೂ ಮಾತನಾಡಿದರೆ ನನ್ನ ಸ್ವಾರ್ಥ ಎಂದು ಹೇಳುತ್ತಾರೆ. ನೀವು ಮಾತನಾಡಿದರೆ ದೇವರ ಪರವಾಗಿ ಮಾತನಾಡಿದಂತೆ. ನೀವೆಲ್ಲರೂ ದೇವರ ಮಕ್ಕಳಂತೆ. ಮತ್ತೆ ಈ ಸರಕಾರವನ್ನು ತರುವುದು ನಿಮ್ಮ ಜವಾಬ್ದಾರಿ ಅಲ್ಲವೇ? ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

ನಮ್ಮ ಸರಕಾರದಲ್ಲಿ ಧಾರ್ಮಿಕ ದತ್ತಿ ಇಲಾಖೆ ಇದೆ. ಧರ್ಮ ಯಾವುದಾದರೂ ತತ್ವವೊಂದೇ, ನಾಮ ನೂರಾದರೂ ದೈವವೊಂದೇ, ಪೂಜೆ ಯಾವುದಾದರೂ ಭಕ್ತಿಯೊಂದೇ, ಕರ್ಮ ಹಲವಾದರೂ ನಿಷ್ಠೆಯೊಂದೇ, ದೇವನೊಬ್ಬ ನಾಮ ಹಲವು. ಮುಂದೆ ನಿಮ್ಮ ಸರಕಾರ ಅಧಿಕಾರಕ್ಕೆ ಬರಲು ನೀವು ಶ್ರಮಿಸಬೇಕು ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

ಅರ್ಚಕರಿಗೆ ಜಾತಿ ಇಲ್ಲ, ಧರ್ಮಕ್ಕೆ ಭೇದವಿಲ್ಲ. ಬಡವ ಶ್ರೀಮಂತನೆಂಬ ವ್ಯತ್ಯಾಸವಿಲ್ಲ. ಯಾವ ಧರ್ಮವೂ ಬೇರೆಯವರನ್ನು ದ್ವೇಷ ಮಾಡಿ ಎಂದು ಹೇಳುವುದಿಲ್ಲ. ನಾವು ಎಲ್ಲರನ್ನೂ ಪೂಜಿಸುತ್ತೇವೆ. ಧರ್ಮಗಳು ಪ್ರತಿಯೊಬ್ಬರ ವೈಯಕ್ತಿಕ ವಿಚಾರ. ನೀವು ನಾವು ಜನಿಸುವಾಗ ಇಂತಹುದೇ ಜಾತಿ ಧರ್ಮದಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕುವುದಿಲ್ಲ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

ಅರ್ಚಕರಿಗೆ ತರಬೇತಿಗೆ ಸಹಕಾರ: ಅರ್ಚಕರ ಸಂಘದವರು ಹಾಗೂ ಮಠಗಳು ಕೂತು ಚರ್ಚೆ ಮಾಡಿ ಹಳ್ಳಿಗಳಲ್ಲಿ ಇರುವ 34 ಸಾವಿರ ದೇವಾಲಯಗಳಲ್ಲಿ ಪೂಜೆ ಮಾಡುವವರಿಗೆ ಕಲಿಸಿ. ನೀವು ಅವರಿಗೆ 3 ತಿಂಗಳು ತರಬೇತಿ ನೀಡಿ, ಅದಕ್ಕೆ ಬೇಕಾದ ಸಹಕಾರ ಸರಕಾರ ನೀಡಲಿದೆ. ನಾನು ನನ್ನ ಕ್ಷೇತ್ರದಲ್ಲಿ 300 ದೇವಾಲಯಗಳ ನಿರ್ಮಾಣ, ಜೀರ್ಣೋದ್ಧಾರ ಮಾಡಿದ್ದೇವೆ. ಯಾರು ಭಕ್ತಿಯಿಂದ ಪ್ರಾರ್ಥನೆ ಮಾಡುತ್ತಾರೋ ಅವರಿಗೆ ನೆಮ್ಮದಿ ಸಿಗುತ್ತದೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

ರೆಡ್ಡಿಗೆ ಮುಜರಾಯಿ ಇಲಾಖೆ ನೀಡಲು ಸಿದ್ಧ: ‘ರಾಮಲಿಂಗಾರೆಡ್ಡಿ ಅವರಿಗೆ ಮುಜರಾಯಿ ಇಲಾಖೆ ಜವಾಬ್ದಾರಿ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದೀರಿ. ಅವರಿಗೆ ಬೆಂಗಳೂರು ಖಾತೆ ನೀಡುವ ಆಸೆ ನನಗಿತ್ತು. ಆದರೆ, ಪಕ್ಷ ತೀರ್ಮಾನ ಮಾಡಿತ್ತು. ಈಗ ನಿಮ್ಮ ಬೇಡಿಕೆಯಂತೆ ರಾಮಲಿಂಗಾರೆಡ್ಡಿ ಅವರಿಗೆ ಮುಜರಾಯಿ ಇಲಾಖೆ ನೀಡಲು ಸಿದ್ಧ, ನೀವು ಹಾಗೂ ಅವರು ಕೂತು ಚರ್ಚೆ ಮಾಡಿ. ಬೇರೆ ಯಾವುದಾದರೂ ಖಾತೆ ಕೇಳಿದರೂ ನಾನು ಕೊಡುತ್ತೇನೆ’ ಎಂದು ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News