ಬೆಂಗಳೂರು: ಕೊರೆಯುವ ಚಳಿ ಮತ್ತು ಸಂಕಷ್ಟಗಳ ನಡುವೆಯೂ 8ನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಅಹೋರಾತ್ರಿ ಧರಣಿ ಸೋಮವಾರ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಕಾರ್ಯಕರ್ತೆಯರು ಮಾನವ ಸರಪಳಿ ನಿರ್ಮಿಸಿ, ರಾಜ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಎಲ್ಲ ಜಿಲ್ಲೆಗಳಿಂದ ಬಂದ ಸಾವಿರಾರು ಆಶಾ ಕಾರ್ಯಕರ್ತೆಯರು ಫ್ರೀಡಂ ಪಾರ್ಕ್ ಸುತ್ತುವರೆದು ‘ಆಶಾ ಸರಪಳಿ’ ನಿರ್ಮಿಸುವ ಮೂಲಕ ಸರಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ತಕ್ಷಣವೇ ಮಾಸಿಕ 15ಸಾವಿರ ರೂ. ಗೌರವ ಧನ, ನಿವೃತ್ತ ಆಶಾಗಳಿಗೆ 5 ಲಕ್ಷ ರೂ. ಇಡುಗಂಟು ನೀಡುವುದು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಧರಣಿನಿರತ ಕಾರ್ಯಕರ್ತೆಯರು ಆಗ್ರಹಿಸಿದರು.

ಫ್ರೀಡಂ ಪಾರ್ಕ್ ಸುತ್ತಲೂ ಕೈ-ಕೈ ಹಿಡಿದು ನಿಂತ ಸಾವಿರಾರು ಆಶಾ ಕಾರ್ಯಕರ್ತೆಯರು, ತಮ್ಮ ಒಗ್ಗಟ್ಟು ಸರಪಳಿಯಂತೆ ಗಟ್ಟಿಯಾಗಿದೆ ಎಂಬ ಸಂದೇಶವನ್ನು ಸಾರಿದರು. ನ್ಯಾಯಯುತ ಹೋರಾಟಕ್ಕೆ ಸ್ಪಂದಿಸದ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಧರಣಿಯಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯಾಧ್ಯಕ್ಷ ಕೆ. ಸೋಮಶೇಖರ್ ಯಾದಗಿರಿ, ಕಾರ್ಯದರ್ಶಿ ಡಿ.ನಾಗಲಕ್ಷ್ಮಿ ಸೇರಿದಂತೆ ಸಾವಿರಾರು ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.

‘ಆಶಾ ಕಾರ್ಯಕರ್ತೆರ ಹೋರಾಟ ಇಂದು ಮನೆ ಮಾತಾಗಿದೆ. ಅವರ ನಿಸ್ವಾರ್ಥ ಸೇವೆಯನ್ನು ಜನರು ಗೌರವದಿಂದ ಕಾಣುತ್ತಾರೆ. ಆದರೆ ರಾಜ್ಯ ಸರಕಾರ ಆಶಾ ಕಾರ್ಯಕರ್ತೆಯರನ್ನು ಗೌರವದಿಂದ ಕಾಣುತ್ತಿಲ್ಲ. ಸರಕಾರ ಆಶಾ ಕಾರ್ಯಕರ್ತೆಯರಿಗೆ ಮೋಸ ಮಾಡಿದೆ. ಈ ಅನ್ಯಾಯದ ವಿರುದ್ಧ ಆಶಾ ಕಾರ್ಯಕರ್ತೆಯರು ದಿಟ್ಟವಾಗಿ ನಿಂತಿದ್ದಾರೆ. ದಡ ಮುಟ್ಟುವ ವರೆಗೂ ಈ ಹೋರಾಟ ನಿಲ್ಲಬಾರದು’

-ಕೆ.ರಾಧಾಕೃಷ್ಣ, ಎಐಟಿಯುಸಿ ಅಖಿಲ ಭಾರತದ ಅಧ್ಯಕ್ಷ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಮಾಳಿಂಗರಾಯ ಕೆಂಭಾವಿ/ವಾರ್ತಾಭಾರತಿ

contributor

ಮಾಳಿಂಗರಾಯ ಕೆಂಭಾವಿ ಅವರು ತುಮಕೂರು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ, ಐಚ್ಛಿಕ ಕನ್ನಡ, ರಾಜ್ಯಶಾಸ್ತ್ರ ವಿಷಯಗಳಲ್ಲಿ ಪದವಿ ಹಾಗೂ ಪತ್ರಿಕೋದ್ಯಮ ಡಿಪ್ಲೊಮಾ ಪಡೆದಿದ್ದು, ವಾರ್ತಾಭಾರತಿ ಕನ್ನಡ ದೈನಿಕದಲ್ಲಿ 2023ರಿಂದ ಉಪಸಂಪಾದಕ, ವರದಿಗಾರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ಸಿನೆಮಾ ವಿಮರ್ಶೆ ಬರೆಯುವುದು ಇವರ ಹವ್ಯಾಸವಾಗಿದೆ.