Bengaluru | ಸಾಧುಗಳ ಸೋಗಿನಲ್ಲಿ ಚಿನ್ನದುಂಗುರ ದೋಚಿದ ಆರೋಪಿಗಳು: ಪ್ರಕರಣ ದಾಖಲು
ಬೆಂಗಳೂರು: ನಾಗಸಾಧುಗಳ ವೇಷ ಧರಿಸಿ ಆಶೀರ್ವಾದ ಮಾಡುವ ಸೋಗಿನಲ್ಲಿ ವ್ಯಕ್ತಿಯ ಚಿನ್ನದುಂಗುರ ಕಳವು ಮಾಡಿ ಆರೋಪಿಗಳು ಪರಾರಿಯಾಗಿರುವ ಘಟನೆ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ.
ವಿಜಯನಗರದ ಆರ್‍ಪಿಸಿ ಲೇಔಟ್‍ನಲ್ಲಿ ಜೂ.12ರಂದು ಘಟನೆ ನಡೆದಿದೆ. ವಂಚನೆಗೊಳಗಾದ ಅರುಣ್ ಶ್ರೀಪಾದ ಎಂಬವರು ನೀಡಿದ ದೂರಿನನ್ವಯ ಇಬ್ಬರು ಅಪರಿಚಿತರ ವಿರುದ್ಧ ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ವಿವರ:
ಸ್ನೇಹಿತೆಯ ಕಚೇರಿಗೆ ಕೆಲಸದ ನಿಮಿತ್ತ ಅರುಣ್ ಬಂದಿದ್ದರು. ಈ ವೇಳೆ ನಾಗಸಾಧುಗಳಂತೆ ಆರೋಪಿಗಳೂ ಕಚೇರಿಗೆ ಬಂದಿದ್ದಾರೆ. ಈ ಸಂದರ್ಭದಲ್ಲಿ ವಿಚಾರಿಸಿ ಅರುಣ್ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ. ಕಾಶಿ, ಅಯೋಧ್ಯೆ ಹಾಗೂ ಉತ್ತರ ಭಾರತದ ಧಾರ್ಮಿಕ ಕ್ಷೇತ್ರಗಳು ಹಾಗೂ ನದಿಗಳ ಬಗ್ಗೆ ಮಾತನಾಡುತ್ತಾ, ಈ ಕ್ಷೇತ್ರಗಳಲ್ಲಿ ಸ್ನಾನ ಮಾಡಿದ್ದೀರಾ ಎಂದು ಕೇಳಿದ್ದಾರೆ. ಬಳಿಕ ಕುಟುಂಬ ಹಾಗೂ ವ್ಯವಹಾರದ ಬಗ್ಗೆ ಮಾತನಾಡಿ ಆಶೀರ್ವಾದ ಮಾಡಿದರೆ ಒಳ್ಳೆಯದಾಗಲಿದೆ ಎಂದಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಅರುಣ್, ನನಗೆ ನಮ್ಮ ದೇವರಿದ್ದಾನೆ ಎಂದು ಹೇಳಿದ್ದಾರೆ. ಬಳಿಕ ಪೇಪರ್ ನಲ್ಲಿ ವಿಭೂತಿ ಹಾಕಿ ಅರುಣ್ ಹಣೆ ಮೇಲೆ ತ್ರಿಶೂಲ ಇಟ್ಟಿದ್ದಾರೆ. ಆರ್ಶೀವಾದ ಮಾಡುವ ನೆಪದಲ್ಲಿ ಎಡಗೈನಲ್ಲಿದ್ದ 11 ಗ್ರಾಂ ಉಂಗುರ ದೋಚಿದ್ದಾರೆ ಎಂದು ಅರುಣ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.