ದೇವನಹಳ್ಳಿಯಲ್ಲಿ ಡಿ-ನೋಟಿಫೈ ಮಾಡಿದ ಸಿದ್ದರಾಮಯ್ಯ ಜೈಲಿಗೆ ಹೋದ್ರಾ?: ನಿಖಿಲ್ ಕುಮಾರಸ್ವಾಮಿ ಪ್ರಶ್ನೆ
ಬಿಡದಿ ಟೌನ್‍ಶಿಪ್ ಯೋಜನೆ ವಿರೋಧಿಸಿ ಜೆಡಿಎಸ್ ನಿಂದ ಪಾದಯಾತ್ರೆ
Photo credit: X/@Nikhil_Kumar_k
ಬೆಂಗಳೂರು: ‘ಮಾತೆತ್ತಿದರೆ ಕುಮಾರಸ್ವಾಮಿ ಕಾಲದಲ್ಲಿ ಕೆಂಪು ವಲಯ ಎಂದು ಘೋಷಣೆ ಮಾಡಿದರು. ಭೂಮಿ ಡಿನೋಟಿಫಿಕೇಷನ್ ಮಾಡಿ ನಾನು ಜೈಲಿಗೆ ಹೋಗಲು ನಾನು ತಯಾರಿಲ್ಲ ಎಂದು ಸಿಎಂ ಡಿ.ಕೆ.ಶಿವಕುಮಾರ್ ಹೇಳುತ್ತಿದ್ದಾರೆ. ಆದರೆ, ದೇವನಹಳ್ಳಿಯಲ್ಲಿ ಕಾಂಗ್ರೆಸ್ ಸರಕಾರದ ಸಿಎಂ ಸಿದ್ದರಾಮಯ್ಯ ಡಿ-ನೋಟಿಫೈ ಮಾಡಿದರಲ್ಲ, ಆಗ ಅವರು ಜೈಲಿಗೆ ಹೋಗಿದ್ದರೇ?’ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ರವಿವಾರ ನಗರದಲ್ಲಿ ಬಿಡದಿ ಟೌನ್‍ಶಿಪ್ ಯೋಜನೆ ವಿರೋಧಿಸಿ ಜೆಡಿಎಸ್ ಹಮ್ಮಿಕೊಂಡಿದ್ದ ಪಾದಯಾತ್ರೆಯ ವೇಳೆ ಮಾತನಾಡಿದ ಅವರು, ಬಿಡದಿ ಟೌನ್‍ಶಿಪ್ ಯೋಜನೆಯನ್ನು ಸರಕಾರ ಪ್ರತಿಷ್ಠೆ ವಿಷಯವನ್ನಾಗಿ ಮಾಡುತ್ತಿದೆ. ಇದರಲ್ಲಿ ಸಾರ್ವಜನಿಕರ ಹಿತಾಸಕ್ತಿ ಇಲ್ಲ. ರೈತರ ಅನುಮತಿ ಪಡೆಯದೇ ಯೋಜನೆ ಮಾಡಲು ಮುಂದಾಗಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಇಲ್ಲಿನ ಶೇ.81ರಷ್ಟು ಸಣ್ಣ ರೈತರಿಗೆ ಇದರಿಂದ ತೊಂದರೆಯಾಗಲಿದೆ. ಇಲ್ಲಿಯ ರೈತರು ತಿಂಗಳಿಗೆ 6 ಲಕ್ಷ ಲೀಟರ್ ಹಾಲು ಉತ್ಪಾದನೆ ಮಾಡುತ್ತಿದ್ದಾರೆ. ಸರಕಾರ ಏಕಾಏಕಿ ಅಂತಿಮ ಅಧಿಸೂಚನೆ ಹೊರಡಿಸಿರುವುದು ಯಾವ ಕಾರಣಕ್ಕೆ?. ಸಾಲ ತೆಗೆದುಕೊಂಡು ಯೋಜನೆ ಮಾಡುವುದು ಯಾರ ಉದ್ಧಾರಕ್ಕೆ? ಎಂದು ಅವರು ಕೇಳಿದರು.
ರಿಯಲ್ ಎಸ್ಟೇಟ್ ಕಂಪೆನಿಯ ಜೊತೆ ಕಮಿಷನ್ ಪಡೆಯಲು ಯೋಜನೆ ಮಾಡುತ್ತಿದ್ದೀರಾ?. ಏನೇ ಯೋಜನೆ ಮಾಡಿದರೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು 30 ಸಾವಿರ ಕೋಟಿ ರೂ.ವೆಚ್ಚದ್ದೇ ಮಾಡುತ್ತಾರೆ. ಸುರಂಗ ರಸ್ತೆ, ಕಸದ ಟೆಂಡರ್ ಎಲ್ಲ 30 ಸಾವಿರ ಕೋಟಿ ರೂ.ಯೋಜನೆಗಳು. ಅದಕ್ಕಿಂತ ಕಮ್ಮಿ ನಮ್ಮ ಸಿಎಂ ಮುಟ್ಟುವುದೇ ಇಲ್ಲ ಎಂದು ನಿಖಿಲ್ ಕುಮಾರಸ್ವಾಮಿ ವ್ಯಂಗ್ಯವಾಡಿದರು.
ಇಂದಿನ ಪಾದಯಾತ್ರೆಯ ಹೋರಾಟ ಕೇವಲ ಆರಂಭ. ಮುಂದಿನ ದಿನಗಳಲ್ಲಿ ಎಂತಹ ಸಂದರ್ಭದಲ್ಲೂ ರೈತರ ಜೊತೆಗೆ ಜೆಡಿಎಸ್ ಪಕ್ಷ ಗಟ್ಟಿಯಾಗಿ ನಿಲ್ಲಲಿದೆ. ಒಂದು ವೇಳೆ ಸಂದರ್ಭ ಬಂದರೆ ರೈತರ ಜೊತೆ ‘ವಿಧಾನಸೌಧ ಚಲೋ’ ಆಂದೋಲನಕ್ಕೂ ಸಿದ್ಧ. ಈ ದಪ್ಪ ಚರ್ಮದ ಸರಕಾರದ ವಿರುದ್ಧ ಕಾನೂನು ಹೋರಾಟಕ್ಕೂ ಸಿದ್ಧರಿದ್ದೇವೆ ಎಂದು ಅವರು ಎಚ್ಚರಿಕೆ ನೀಡಿದರು.