ಸಾಂದರ್ಭಿಕ ಚಿತ್ರ

ಬೆಂಗಳೂರು : ಪತಿಯಿಂದ ದೂರವಾಗಿ ಇಬ್ಬರು ಮಕ್ಕಳೊಂದಿಗೆ ತವರು ಮನೆಯ ಪಕ್ಕದ ಮನೆಯಲ್ಲಿ ವಾಸವಾಗಿದ್ದ ತನ್ನ ತಂಗಿಯನ್ನೇ ವ್ಯಕ್ತಿಯೊಬ್ಬ ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಜುನ್ನಸಂದ್ರದಲ್ಲಿ ನಡೆದಿದೆ. ಮೀನಾಕ್ಷಿ(39) ಎಂಬುವವರು ಹತ್ಯೆಯಾಗಿದ್ದು, ಹಂತಕನನ್ನು ಜಯರಾಮ್ ಎಂದು ಗುರುತಿಸಲಾಗಿದೆ.

ಮೀನಾಕ್ಷಿ ಕೆಲವು ತಿಂಗಳುಗಳಿಂದ ಪತಿಯಿಂದ ದೂರವಾಗಿ ತನ್ನ ಇಬ್ಬರು ಮಕ್ಕಳೊಂದಿಗೆ ತವರು ಮನೆಯ ಬಳಿ ವಾಸವಾಗಿದ್ದರು. ಜಯರಾಮ್ ವಾಸವಿದ್ದ ಮನೆಯ ಬಳಿ ಸಣ್ಣ ಮನೆಯೊಂದರಲ್ಲಿ ಅವರು ನೆಲೆಸಿದ್ದರು. ಆದರೆ, ತಂಗಿ ಅಲ್ಲಿ ವಾಸವಿರುವುದಕ್ಕೆ ಜಯರಾಮ್ ಹಾಗೂ ಆತನ ಕುಟುಂಬದವರು ಆಕ್ಷೇಪ ವ್ಯಕ್ತಪಡಿಸುತ್ತಿದ್ದರು. ಮನೆ ಖಾಲಿ ಮಾಡುವಂತೆ ಜಯರಾಮ್ ಪದೇ ಪದೇ ತಂಗಿಯೊಂದಿಗೆ ಜಗಳವಾಡುತ್ತಿದ್ದ ಎಂದು ತಿಳಿದು ಬಂದಿದೆ.

ಬೆಳಿಗ್ಗೆ 11.30ರ ವೇಳೆಗೆ ಇದೇ ಕಾರಣಕ್ಕೆ ಜಯರಾಮ್ ಪತ್ನಿ ಹಾಗೂ ಮೀನಾಕ್ಷಿ ನಡುವೆ ಮಾತಿನ ಚಕಮಕಿ ಆರಂಭವಾಗಿದೆ. ಮನೆ ಖಾಲಿ ಮಾಡಿಕೊಂಡು ಹೋಗುವಂತೆ ಜಯರಾಮ್ ಪತ್ನಿಯು ಮೀನಾಕ್ಷಿಗೆ ತಾಕೀತು ಮಾಡಿ ಜಗಳವಾಡಿದ್ದಾರೆ. ಪತ್ನಿ ನಡೆದ ಗಲಾಟೆಯ ವಿಚಾರವನ್ನು ಜಯರಾಮ್‍ಗೆ ತಿಳಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಜಯರಾಮ್, ಏಕಾಏಕಿ ಸ್ಥಳಕ್ಕೆ ಬಂದಿದ್ದು, ಕೈಯಲ್ಲಿದ್ದ ಬ್ಯಾಟ್‍ನಿಂದ ತಂಗಿ ಮೀನಾಕ್ಷಿಯ ತಲೆಗೆ ಬಲವಾಗಿ ಹೊಡೆದಿದ್ದಾನೆ. ಇದರಿಂದ ತೀವ್ರವಾಗಿ ಗಾಯಗೊಂಡ ಮೀನಾಕ್ಷಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಗೊತ್ತಾಗಿದೆ.

ಬೆಳ್ಳಂದೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸೇಂಟ್ ಜಾನ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಹತ್ಯೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತಲೆಮರೆಸಿಕೊಂಡಿರುವ ಆರೋಪಿಗೆ ಶೋಧ ಕಾರ್ಯ ನಡೆಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor