Bengaluru | ಚರ್ಚ್ ಪಾದ್ರಿಗೆ ಬೆದರಿಕೆ, ಕ್ರೈಸ್ತ, ಮುಸ್ಲಿಮ್ ಧರ್ಮಗಳ ಅವಹೇಳನ ಆರೋಪ: ಸತ್ಯನಿಷ್ಠ ಆರ್ಯ ಎಂಬಾತನ ವಿರುದ್ಧ ದೂರು ದಾಖಲು
Screengrab:X/@TheRFTeam
ಬೆಂಗಳೂರು: ಕಾರ್ಯಕ್ರಮವೊಂದಕ್ಕೆ ಉದ್ದೇಶ ಪೂರಕವಾಗಿ ಪ್ರವೇಶಿಸಿ ಚರ್ಚ್ ಪಾದ್ರಿಗೆ ಬೆದರಿಕೆವೊಡ್ಡಿರುವುದು ಮಾತ್ರವಲ್ಲದೆ, ಕ್ರೈಸ್ತ ಹಾಗೂ ಮುಸ್ಲಿಮ್ ಸಮುದಾಯಗಳನ್ನು ಗುರಿಯಾಗಿಸಿಕೊಂಡು ಅವಹೇಳನಕಾರಿ ಆಗಿ ಮಾತನಾಡಿರುವ ಆರೋಪದಡಿ ಸತ್ಯನಿಷ್ಠ ಆರ್ಯ ಎಂಬಾತನ ವಿರುದ್ಧ ಇಲ್ಲಿನ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಹೆಸರಿನ ಖಾತೆಗಳನ್ನು ತೆರೆದಿರುವ ಸತ್ಯನಿಷ್ಠ ಆರ್ಯ ಎಂಬಾತ, ನಿರಂತರ ಕೋಮುದ್ವೇಷ ಹರಡುವ ಸಂದೇಶ ಹಾಗೂ ಭಾಷಣಗಳನ್ನು ಮಾಡಿ ಹರಿಬಿಡುತ್ತಿದ್ದ. ಜತೆಗೆ, ಕೋರಮಂಗಲ ವ್ಯಾಪ್ತಿಯ ಬ್ಯಾಂಕ್ ಒಂದರಲ್ಲಿ ಖಾತೆ ತೆರೆದು ತನಗೆ ಆರ್ಥಿಕ ಸಹಾಯ ಮಾಡುವಂತೆ, ಧರ್ಮ ರಕ್ಷಣೆ ಮಾಡುವಂತೆ ಸಂದೇಶ ಹಾಕುತ್ತಿದ್ದ ಎನ್ನಲಾಗಿದೆ.
ಇತ್ತೀಚಿಗೆ ಕ್ರೈಸ್ತ ಧರ್ಮದ ಪ್ರಾರ್ಥನಾ ಕಾರ್ಯಕ್ರಮಕ್ಕೆ ತನ್ನ ತಂಡದೊಂದಿಗೆ ನುಗ್ಗಿದ ಸತ್ಯನಿಷ್ಠ ಆರ್ಯ, ಕ್ರೈಸ್ತರ ಬಗ್ಗೆ, ಯೇಸುಕ್ರಿಸ್ತರ ಕುರಿತು ಅವಹೇಳನಕಾರಿ ಆಗಿ ಮಾತನಾಡಿದ್ದ. ಈ ಬಗ್ಗೆ ಸ್ಥಳದಲ್ಲಿದ್ದ ಮಹಿಳೆಯೊಬ್ಬರು ಪ್ರಶ್ನಿಸಿದಾಗ, ಅವರನ್ನು ನಿಂದಿಸಿದ್ದ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಾನೂನು ಕ್ರಮ ಜರುಗಿಸುವಂತೆ ಹಲವರು ನಗರ ಪೊಲೀಸ್ ಆಯುಕ್ತರನ್ನು ಒತ್ತಾಯಿಸಿದ್ದಾರೆ.
ಸದ್ಯ ಘಟನೆ ಸಂಬಂಧ ಕೋರಮಂಗಲ ಠಾಣಾ ಪೊಲೀಸರು ಎನ್ಸಿಆರ್ ದಾಖಲಿಸಿಕೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿವೊಬ್ಬರು ಹೇಳಿದ್ದಾರೆ.