ಅಲ್ಪಸಂಖ್ಯಾತರು, ಮಹಿಳೆಯರು, ಮಕ್ಕಳು ಬೀದಿಪಾಲಾದರೂ ಆಯೋಗಗಳ ಮೌನ ಯಾಕೆ?: ಸಾಲಿಡಾರಿಟಿ ಯೂತ್ ಮೂವ್ಮೆಂಟ್ ಪ್ರಶ್ನೆ
ಕೋಗಿಲು ಬಡಾವಣೆ ಮನೆಗಳ ಧ್ವಂಸ ಪ್ರಕರಣ
ಬೆಂಗಳೂರು: ಉತ್ತರ ನಗರ ಪಾಲಿಕೆ ವ್ಯಾಪ್ತಿಯ ಕೋಗಿಲು ಬಡಾವಣೆಯಲ್ಲಿ 400ಕ್ಕೂ ಹೆಚ್ಚು ಮನೆಗಳನ್ನು ಏಕಾಏಕಿ ಧ್ವಂಸಗೊಳಿಸಿರುವ ಘಟನೆಯ ಬಗ್ಗೆ ಆಯೋಗಗಳು ಏಕೆ ಮೌನವಹಿಸಿವೆ? ಎಂದು ಸಾಲಿಡಾರಿಟಿ ಯೂತ್ ಮೂವ್ಮೆಂಟ್, ಕರ್ನಾಟಕ ಪ್ರಶ್ನಿಸಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಈ ಮನೆಗಳ ಪೈಕಿ ಶೇ.90ಕ್ಕೂ ಹೆಚ್ಚು ಮನೆಗಳು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವು ಎಂಬುದು ಸ್ಥಳೀಯ ಮಾಹಿತಿಯಿಂದ ಸ್ಪಷ್ಟವಾಗುತ್ತಿದೆ.
ಈ ಧ್ವಂಸ ಕಾರ್ಯಾಚರಣೆಯಿಂದ ನೂರಾರು ಮಹಿಳೆಯರು, ಸಣ್ಣ ಮಕ್ಕಳು, ಬಾಣಂತಿಯರು ಹಾಗೂ ವೃದ್ಧರು ಬೀದಿಪಾಲಾಗಿದ್ದಾರೆ.
ತೀವ್ರ ಚಳಿ, ಆಹಾರ-ನೀರು-ಆಶ್ರಯದ ಕೊರತೆಯ ನಡುವೆಯೇ ಅವರು ಬದುಕು ಸಾಗಿಸುವಂತಾಗಿದೆ. ಇದು ಕೇವಲ ಆಡಳಿತಾತ್ಮಕ ಕ್ರಮವಲ್ಲ, ಮಾನವೀಯ ದುರಂತ. ಶೇ.90ರಷ್ಟು ಅಲ್ಪಸಂಖ್ಯಾತರು ಮನೆ ಕಳೆದುಕೊಂಡರೂ, ಆಯೋಗ ಯಾಕೆ ಮೌನವಾಗಿದೆ? ಇದು ಅಲ್ಪಸಂಖ್ಯಾತರ ಹಕ್ಕುಗಳ ಮೇಲಿನ ನೇರ ದಾಳಿ ಅಲ್ಲವೇ? ಎಂದು ಸಾಲಿಡಾರಿಟಿ ಯೂತ್ ಮೂವ್ಮೆಂಟ್ ರಾಜ್ಯ ಅಲ್ಪಸಂಖ್ಯಾತರ ಆಯೋಗಕ್ಕೆ ಪ್ರಶ್ನೆ ಮಾಡಿದೆ.
ಮಹಿಳೆಯರು, ಗರ್ಭಿಣಿಯರು, ಬಾಣಂತಿ ಯರು ಬೀದಿಪಾಲಾಗಿರುವಾಗ ಮಹಿಳಾ ಆಯೋಗ ಯಾಕೆ ಸ್ಥಳಕ್ಕೆ ಭೇಟಿ ನೀಡಿಲ್ಲ? ಇದು ಮಹಿಳಾ ಹಕ್ಕುಗಳ ಉಲ್ಲಂಘನೆ ಅಲ್ಲವೇ? ಎಂದು ರಾಜ್ಯ ಮಹಿಳಾ ಆಯೋಗಕ್ಕೆ ಪ್ರಶ್ನೆ ಮಾಡಿದೆ.
ಸಣ್ಣ ಮಕ್ಕಳು ಶಿಕ್ಷಣ, ಭದ್ರತೆ, ಆಶ್ರಯವಿಲ್ಲದೆ ಬೀದಿಯಲ್ಲಿ ಬದುಕುವಂತಾದರೂ ಮಕ್ಕಳ ಆಯೋಗ ಯಾಕೆ ಸ್ಪಂದಿಸುತ್ತಿಲ್ಲ? ಮಕ್ಕಳ ಭವಿಷ್ಯಕ್ಕೆ ಹೊಣೆ ಯಾರು? ಎಂದು ರಾಜ್ಯ ಮಕ್ಕಳ ಹಕ್ಕುಗಳ ಆಯೋಗಕ್ಕೆ ಪ್ರಶ್ನೆ ಮಾಡಿದೆ.
ಮುಂಚಿತವಾಗಿ ನೋಟಿಸ್ ನೀಡದೆ ಮನೆ ಧ್ವಂಸ, ಬದುಕಿನ ಹಕ್ಕಿನ ಉಲ್ಲಂಘನೆ ಆಗಿರುವಾಗ ಮಾನವ ಹಕ್ಕುಗಳ ಆಯೋಗ ಯಾಕೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಲ್ಲ? ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಪ್ರಶ್ನೆ ಮಾಡಿದೆ.
ಎಲ್ಲ ಆಯೋಗಗಳು ತಕ್ಷಣವೇ ಕೋಗಿಲು ಬಡಾವಣೆಗೆ ಭೇಟಿ ನೀಡಿ ಸತ್ಯಾಂಶ ವರದಿ ಸಲ್ಲಿಸಬೇಕು. ಮನೆ ಕಳೆದುಕೊಂಡ ಕುಟುಂಬಗಳಿಗೆ ತುರ್ತು ಪರಿಹಾರ ಮತ್ತು ಪುನರ್ವಸತಿ ವ್ಯವಸ್ಥೆ ಮಾಡಲು ಸರಕಾರದ ಮೇಲೆ ಒತ್ತಡ ಹೇರಬೇಕು. ಜವಾಬ್ದಾರಿಯಿಲ್ಲದೆ ನಡೆದ ಧ್ವಂಸ ಕಾರ್ಯಾಚರಣೆಗೆ ಹೊಣೆಗಾರ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಾಲಿಡಾರಿಟಿ ಯೂತ್ ಮೂವ್ಮೆಂಟ್, ಕರ್ನಾಟಕ ಒತ್ತಾಯಿಸಿದೆ.