ನದೀಮ್ ಖಾನ್ರನ್ನು ಗೃಹ ಬಂಧನದಲ್ಲಿರಿಸಿರುವುದು ಖಂಡನೀಯ: ಸೋಲಿಡಾರಿಟಿ ಯೂತ್ ಮೂವ್ಮೆಂಟ್
ನದೀಮ್ ಖಾನ್ (Photo source: wikipedia.org)
ಬೆಂಗಳೂರು: ಸಾಮಾಜಿಕ ಕಾರ್ಯಕರ್ತರ ನದೀಮ್ ಖಾನ್ ಅವರನ್ನು ಗೃಹಬಂಧನದಲ್ಲಿರಿಸಿರುವ ದಿಲ್ಲಿ ಪೊಲೀಸರ ನಡೆ ಖಂಡನೀಯ ಎಂದು ಸೋಲಿಡಾರಿಟಿ ಯೂತ್ ಮೂವ್ಮೆಂಟ್-ಕರ್ನಾಟಕ ತಿಳಿಸಿದೆ.
ಈ ಕುರಿತು ಪ್ರಕಟನೆ ನೀಡಿರುವ ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕ, ಮಸೀದಿಗಳು ಹಾಗೂ ಇತರ ಧಾರ್ಮಿಕ ಸ್ಥಳಗಳ ಮೇಲಿನ ದಾಳಿ, ಮತದಾರರ ಪಟ್ಟಿಯಲ್ಲಿನ ಹೆಸರುಗಳನ್ನು ಕೈಬಿಡುವ ಕುರಿತು ಉಂಟಾಗಿರುವ ಆತಂಕಗಳು ಹಾಗೂ ಹೆಚ್ಚುತ್ತಿರುವ ದ್ವೇಷಪೂರಿತ ಅಪರಾಧಗಳ ವಿರುದ್ಧ ನವದಿಲ್ಲಿಯ ಜಂತರ್ ಮಂತರ್ ನಲ್ಲಿ ನಡೆಯಬೇಕಿದ್ದ ಪ್ರತಿಭಟನೆಯಲ್ಲಿ ಭಾಗವಹಿಸುವುದನ್ನು ತಡೆಯುವ ಉದ್ದೇಶದಿಂದ ಸಾಮಾಜಿಕ ಕಾರ್ಯಕರ್ತ ನದೀಮ್ ಖಾನ್ ಅವರನ್ನು ದಿಲ್ಲಿ ಪೊಲೀಸರು ಗೃಹ ಬಂಧನದಲ್ಲಿರಿಸಿರುವ ಖಂಡನೀಯ ಎಂದು ತಿಳಿಸಿದೆ.
ಧಾರ್ಮಿಕ ಸ್ಥಳಗಳ ಮೇಲಿನ ದಾಳಿಗಳು ಮತ್ತು SIR ಮೂಲಕ ಮತದಾರರ ಪಟ್ಟಿಯಿಂದ ಹೆಸರುಗಳು ಕೈಬಿಡುವ ಕುರಿತು ವ್ಯಕ್ತವಾಗುತ್ತಿರುವ ಆತಂಕಗಳ ವಿರುದ್ಧ ಧ್ವನಿ ಎತ್ತುವುದಕ್ಕಾಗಿ ಜಂತರ್ ಮಂತರ್‍ನಲ್ಲಿ ಪ್ರತಿಭಟನೆ ಆಯೋಜಿಸಲಾಗಿತ್ತು. ಸೆ.29ರಂದು ಬೆಳಗ್ಗೆ ದಿಲ್ಲಿಯಲ್ಲಿರುವ ನದೀಮ್ ಖಾನ್ ಅವರ ಮನೆಗೆ ತೆರಳಿದ್ದ ಪೊಲೀಸರು, ಪ್ರತಿಭಟನೆಯಲ್ಲಿ ಭಾಗವಹಿಸಲು ಅವರು ಹೊರಗೆ ತೆರಳದಂತೆ ಅವರನ್ನು ಅಲ್ಲಿಯೇ ನಿರ್ಬಂಧಿಸಿದ್ದಾರೆ. ಶಾಂತಿಯುತ ಪ್ರತಿಭಟನೆ ಮಾಡಲು ದೇಶದ ಸಂವಿಧಾನ ನೀಡಿರುವ ಹಕ್ಕನ್ನು ಕೂಡ ಕಸಿದುಕೊಳ್ಳಲಾಗಿದೆ ಎಂದು ತಿಳಿಸಿದೆ.
ಭಾರತದ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಹಕ್ಕು, ಸ್ವಾತಂತ್ರ್ಯ ಮತ್ತು ನ್ಯಾಯದ ಭರವಸೆ ನೀಡಿದೆ. ಶಾಂತಿಯುತವಾಗಿ ಪ್ರಶ್ನಿಸುವುದು, ಭಿನ್ನಾಭಿಪ್ರಾಯ ವ್ಯಕ್ತಪಡಿಸುವುದು ಮತ್ತು ಪ್ರಜಾಸತ್ತಾತ್ಮಕವಾಗಿ ಪ್ರತಿಭಟಿಸುವ ಹಕ್ಕುಗಳು ಪ್ರಜಾಪ್ರಭುತ್ವದ ಮೂಲಭೂತ ಅಂಶಗಳಾಗಿವೆ ಎಂದು ತಿಳಿಸಿದೆ.
ಮೂಲಭೂತ ಹಕ್ಕುಗಳನ್ನು ರಕ್ಷಿಸುವುದು ಸರಕಾರ ಮತ್ತು ಕಾನೂನು ಜಾರಿ ಸಂಸ್ಥೆಗಳ ಕರ್ತವ್ಯವಾಗಿದೆ. ಹಾಗಾಗಿ, ಸಾಮಾಜಿಕ ಕಾರ್ಯಕರ್ತ ನದೀಮ್ ಖಾನ್ ಅವರನ್ನು ಗೃಹ ಬಂಧನದಲ್ಲಿರಿಸಿರುವ ಕ್ರಮವು ಖಂಡನೀಯ ಎಂದು ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕ ತಿಳಿಸಿದೆ.