Bengaluru | ‘ಪಶುವೈದ್ಯಾಧಿಕಾರಿಗಳ ಪರೀಕ್ಷೆ’ ನೇಮಕಾತಿ ಆದೇಶ ಪತ್ರ ನೀಡಲು ಆಗ್ರಹಿಸಿ ಹೋರಾಟ
ಬೆಂಗಳೂರು : ಪಶುವೈದ್ಯಾಧಕಾರಿ ಹುದ್ದೆಗೆ ಆಯ್ಕೆಯಾದ ಪ್ರಕರಣಕ್ಕೆ ಸಂಬಂಧಿಸಿದ ಹಾಗೂ ಅರ್ಹ ಅಭ್ಯರ್ಥಿಗಳಿಗೆ ಸರಕಾರದ ಬಳಿ ಲಭ್ಯವಿರುವ ಸಿಐಡಿ ವರದಿ, ಇಡಿ ವರದಿ ಹಾಗೂ ಅಭ್ಯರ್ಥಿಗಳು ನೀಡುವ ಸ್ವಯಂ ಘೋಷಣಾ ಪತ್ರಗಳನ್ನು ಪರಿಗಣಿಸಿ ಕೂಡಲೇ ಷರತ್ತುಬದ್ಧ ನೇಮಕಾತಿ ಆದೇಶ ಹೊರಡಿಸಬೇಕು ಎಂದು ಪಶುವೈದ್ಯಾಧಿಕಾರಿ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳು ಆಗ್ರಹಿಸಿದ್ದಾರೆ.
ಸೋಮವಾರ ನಗರದ ಫ್ರೀಡಂಪಾರ್ಕ್‍ನಲ್ಲಿ ಹಮ್ಮಿಕೊಂಡಿದ್ದ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಡಾ.ಹನುಮಂತಪ್ಪ ಕಳಸಾಪುರ, ಕೆಪಿಎಸ್‍ಸಿ 342 ಸಾಮಾನ್ಯ ಹಾಗೂ 58 ಬ್ಯಾಕ್‍ಲಾಗ್ ಸೇರಿದಂತೆ ಒಟ್ಟು 400 ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಕೈಗೊಂಡಿತ್ತು. ಸದರಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದ್ದು, ಅಕ್ರಮವಾಗಿ ಭಾಗಿಯಾಗಿದ್ದಾರೆಂದು 29 ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿ, ತನಿಖೆಯನ್ನು ಸಿಐಡಿಗೆ ವಹಿಸಲಾಗಿರುತ್ತದೆ ಎಂದರು.
ಸುಮಾರು ಹತ್ತು ವರ್ಷಗಳ ಬಳಿಕ ನಡೆದ ಪಶುವೈದ್ಯಾಧಿಕಾರಿ ನೇಮಕಾತಿಗಾಗಿ ಅಭ್ಯರ್ಥಿಗಳು ವರ್ಷಗಳ ಕಾಲ ಕಾದು, ಉದ್ಯೋಗದ ಜೊತೆಗೆ ಹಗಲು ರಾತ್ರಿ ಪರಿಶ್ರಮಿಸಿ ಪರೀಕ್ಷೆ ಬರೆದಿದಾರೆ. ಕೆಲ ಮಹಿಳಾ ಅಭ್ಯರ್ಥಿಗಳೂ ಗರ್ಭಾವಸ್ಥೆಯಲ್ಲಿಯೇ, ಇನ್ನು ಕೆಲವರು ಚಿಕ್ಕ ಮಕ್ಕಳ ಆರೈಕೆ ಹಾಗೂ ಕುಟುಂಬದ ಜವಾಬ್ದಾರಿಗಳ ನಡುವೆಯೂ ಪರೀಕ್ಷೆ ಎದುರಿಸಿದ್ದಾರೆ ಎಂದು ಅವರು ತಿಳಿಸಿದರು.
ಸಿಐಡಿ ತನಿಖೆಯು ಯಾವುದೇ ರೀತಿಯ ಹಸ್ತಕ್ಷೇಪವಿಲ್ಲದೆ ಕಾನೂನುಬದ್ಧವಾಗಿ ನಡೆಯಬೇಕು. ಇಂತಹ ಹಗರಣಗಳು ವಿವಿಧ ನೇಮಕಾತಿ ಪ್ರಕ್ರಿಯೆಗಳಲ್ಲಿ ಕೇಳಿ ಬಂದಾಗ ಸುಪ್ರೀಂಕೋರ್ಟ್ ಕಳಂಕಿತ ಹಾಗೂ ಪ್ರಾಮಾಣಿಕ ಅಭ್ಯರ್ಥಿಗಳನ್ನು ವಿಂಗಡಿಸಿ, ನೇಮಕಾತಿ ಪ್ರಕ್ರಿಯೆಯನ್ನು ಮುಂದುವರಿಸಬೇಕೆಂದು ತೀರ್ಪು ನೀಡಿರುತ್ತದೆ. ಆದುದರಿಂದ ರಾಜ್ಯ ಸರಕಾರ ಶೀಘ್ರವಾಗಿ ಒಂದು ತಿಂಗಳೊಳಗಾಗಿ ಸಿಐಡಿಯಿಂದ ಮಧ್ಯಂತರ ವರದಿ ತರಿಸಿಕೊಂಡು, ಪರೀಕ್ಷೆಯಲ್ಲಿ ನೇಮಕವಾದ ಕಳಂಕರಹಿತ ಹಾಗೂ ಪ್ರಾಮಾಣಿಕ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಪತ್ರವನ್ನು ನೀಡಬೇಕು ಎಂದು ಹನುಮಂತಪ್ಪ ಆಗ್ರಹಿಸಿದರು.
ಹೋರಾಟದಲ್ಲಿ ಅಭ್ಯರ್ಥಿಗಳಾದ ಡಾ.ಪೂಜಾ ಎಚ್.ವಿ, ಡಾ.ಭರತ್, ಡಾ.ಗೀತಾಂಜಲಿ, ಡಾ.ಆಕಾಶ್, ಶಿವಪುತ್ರ ಸೇರಿದಂತೆ ಹಲವರು ಭಾಗವಹಿಸಿದ್ದರು.