ಸಾಂದರ್ಭಿಕ ಚಿತ್ರ

ಬೆಂಗಳೂರು : ಕರ್ನಾಟಕದಲ್ಲಿ ಮತದಾರರ ವಿಶೇಷ ಪರಿಷ್ಕರಣೆ(ಎಸ್‌ಐಆರ್) ಪ್ರಕ್ರಿಯೆಯ ಮೂಲಕ ಸಿದ್ಧಪಡಿಸಿರುವ ಅಂತಿಮ ಮತದಾರರ ಪಟ್ಟಿಯನ್ನು ರಾಜ್ಯ ಸರಕಾರ ಒಪ್ಪಬಾರದು. ಈ ಪ್ರಕ್ರಿಯೆಯ ಕುರಿತು ಸಾಮಾಜಿಕ ಲೆಕ್ಕಪರಿಶೋಧನೆ(ಸೋಷಿಯಲ್ ಆಡಿಟ್), ಸಾರ್ವಜನಿಕ ವಿಚಾರಣೆ (ಪಬ್ಲಿಕ್ ಹಿಯರಿಂಗ್) ಹಾಗೂ ಸಾರ್ವಜನಿಕ ಪರಿಶೀಲನೆ ನಡೆಸಬೇಕು ಎಂದು ‘ಎಸ್‌ಐಆರ್ ವಿರೋಧಿ ಒಕ್ಕೂಟ’ದ ಮುಖಂಡರು ಆಗ್ರಹಿಸಿದ್ದಾರೆ.

ಬುಧವಾರ ನಗರದ ಶಾಸಕರ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮುಖಂಡ ನೂರ್ ಶ್ರೀಧರ್ ಮಾತನಾಡಿ, ಎಸ್‌ಐಆರ್ ಪ್ರಕ್ರಿಯೆಯಲ್ಲಿನ ಲೋಪಗಳು, ಅರ್ಹ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಟ್ಟಿರುವ ಆರೋಪಗಳು ಮತ್ತು ಮತದಾನದ ಹಕ್ಕಿನ ಮೇಲಿನ ಪರಿಣಾಮಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಕೇವಲ ಚುನಾವಣಾ ಆಯೋಗ ಪ್ರಕಟಿಸಿರುವ ಪಟ್ಟಿಯನ್ನು ಅಂತಿಮವೆಂದು ಪರಿಗಣಿಸದೇ, ಜನರ ಪಾಲ್ಗೊಳ್ಳುವಿಕೆಯೊಂದಿಗೆ ಅದರ ವಿಶ್ವಾಸಾರ್ಹತೆಯನ್ನು ಪರಿಶೀಲಿಸಬೇಕು ಎಂದು ಸರಕಾರಕ್ಕೆ ಮನವಿ ಮಾಡಿದರು.

ಎಸ್‌ಐಆರ್ ಪ್ರಕ್ರಿಯೆ ಮತ್ತು ಮತದಾರರ ಪಟ್ಟಿಯಲ್ಲಿನ ಲೋಪಗಳಿಗೆ ಸಂಬಂಧಿಸಿದಂತೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಎಸ್‌ಐಆರ್ ವಿರುದ್ಧದ ಹೋರಾಟವನ್ನು ಮತ್ತಷ್ಟು ವಿಸ್ತರಿಸುವ ಭಾಗವಾಗಿ ನ.1ರಂದು ಇಂಡಿಯಾ ಒಕ್ಕೂಟದ ವತಿಯಿಂದ ಹೋರಾಟ ನಡೆಸಲು ಉದ್ದೇಶಿಸಲಾಗಿದೆ. ಇದರೊಂದಿಗೆ, ಪೀಪಲ್ ಅಗೆನೆಸ್ಟ್ ಎಸ್‌ಐಆರ್ ಮಹಾಒಕ್ಕೂಟದ ವತಿಯಿಂದ ನ.26ರಿಂದ ಆರಂಭವಾಗುವ ವಿಧಾನಮಂಡಲದ ಅಧಿವೇಶನದ ಅವಧಿಯಲ್ಲಿ ಹೋರಾಟ ಮುಂದುವರಿಸಲು ಯೋಜಿಸಲಾಗಿದೆ ಎಂದು ನೂರ್ ಶ್ರೀಧರ್ ತಿಳಿಸಿದರು. ಹಿರಿಯ ಪತ್ರಕರ್ತ ಇಂದೂಧರ ಹೊನ್ನಾಪುರ, ದಸಂಸ ಹಿರಿಯ ಮುಖಂಡ ಗುರುಪ್ರಸಾದ್ ಕೆರಗೋಡು, ವಿ.ನಾಗರಾಜ್,

ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡ ಜೆ.ಎಂ.ವೀರಸಂಗಯ್ಯ, ಜೆಸಿಟಿಯುನ ಕೆ.ವಿ.ಭಟ್, ಎದ್ದೇಳು ಕರ್ನಾಟಕದ ಇಂದಿರಮ್ಮ, ಇಸಾಬೆಲ್, ಕೆಎಂಆರ್‌ವಿ ರಾಜ್ಯಾಧ್ಯಕ್ಷ ಕರಿಯಪ್ಪ ಗುಡಿಮನಿ, ಹೋರಾಟಗಾರರಾದ ಡಾ.ಪೂರ್ಣಾನಂದ, ಕೆ.ಎಲ್.ಅಶೋಕ್, ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor