Belagavi | ಸಕ್ಕರೆ ಗೋದಾಮುಗಳಿಗೆ ಮುತ್ತಿಗೆ: ಮಾರಾಟ ಸ್ಥಗಿತಕ್ಕೆ ರೈತರ ಆಗ್ರಹ
ಸಾಂದರ್ಭಿಕ ಚಿತ್ರ Image by fabrikasimf on Magnific
ಬೆಳಗಾವಿ : ಕಬ್ಬಿಗೆ ಸೂಕ್ತ ದರ ನಿಗದಿಪಡಿಸುವುದು ಹಾಗೂ ಸಕ್ಕರೆಗೆ ಕನಿಷ್ಠ ಮಾರಾಟ ಬೆಲೆ ಘೋಷಿಸುವಂತೆ ಆಗ್ರಹಿಸಿ ರೈತರು ನಡೆಸುತ್ತಿರುವ ಹೋರಾಟ ತೀವ್ರಗೊಂಡಿದೆ. ರೈತ ಮುಖಂಡ ಚೂನಪ್ಪ ಪೂಜಾರಿ ನೇತೃತ್ವದಲ್ಲಿ ಜಿಲ್ಲೆಯ ವಿವಿಧ ಸಕ್ಕರೆ ಕಾರ್ಖಾನೆಗಳಿಗೆ ಭೇಟಿ ನೀಡಿದ ರೈತರು, ತಮ್ಮ ಬೇಡಿಕೆಗಳು ಈಡೇರುವವರೆಗೆ ಸಕ್ಕರೆ ಮಾರಾಟ ಮಾಡದಂತೆ ಕಾರ್ಖಾನೆಗಳ ಆಡಳಿತ ಮಂಡಳಿಗಳಿಗೆ ಮನವಿ ಸಲ್ಲಿಸಿದರು.
ಮೂಡಲಗಿ ತಾಲೂಕಿನ ಹುಣಶ್ಯಾಳ ಗ್ರಾಮದಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಒಡೆತನದ ಸತೀಶ್ ಶುಗರ್ಸ್ ಕಾರ್ಖಾನೆಗೆ ರೈತರು ಭೇಟಿ ನೀಡಿ, ಸಕ್ಕರೆ ಗೋದಾಮನ್ನು ಪರಿಶೀಲಿಸಿದರು. ಕಬ್ಬಿನ ದರ ನಿಗದಿಪಡಿಸುವುದರ ಜೊತೆಗೆ ಸಕ್ಕರೆಗೆ ಕನಿಷ್ಠ ಮಾರಾಟ ಬೆಲೆ ಘೋಷಿಸುವವರೆಗೆ ಸಕ್ಕರೆಯನ್ನು ಹೊರಗೆ ಸಾಗಿಸಬಾರದು ಎಂದು ಕಾರ್ಖಾನೆ ಅಧಿಕಾರಿಗಳಿಗೆ ಮನವಿ ಮಾಡಿದರು. ರೈತರ ಮನವಿಗೆ ಕಾರ್ಖಾನೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಪಂದಿಸಿದರು
ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿರುವ ಮಾಜಿ ಸಂಸದ ರಮೇಶ್ ಕತ್ತಿ ಒಡೆತನದ ವಿಶ್ವರಾಜ್ ಶುಗರ್ಸ್ ಕಾರ್ಖಾನೆಯ ಸಕ್ಕರೆ ಗೋದಾಮಿಗೂ ರೈತರು ಮುತ್ತಿಗೆ ಹಾಕಿದರು. ಸಕ್ಕರೆಗೆ ಕನಿಷ್ಠ ಮಾರಾಟ ಬೆಲೆ ಜಾರಿಯಾಗುವವರೆಗೆ ಮಾರಾಟ ಸ್ಥಗಿತಗೊಳಿಸಬೇಕು ಹಾಗೂ ಪ್ರತಿ ಕೆ.ಜಿ. ಸಕ್ಕರೆಗೆ 60 ರೂಪಾಯಿ ದರ ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಸಕ್ಕರೆ ಗೋದಾಮುಗಳಿಗೆ ಬೀಗ ಹಾಕುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಕಾಗವಾಡ ತಾಲೂಕಿನ ಕೆಂಪವಾಡದಲ್ಲಿರುವ ಮಾಜಿ ಸಚಿವ ಶ್ರೀಮಂತ ಪಾಟೀಲ ಒಡೆತನದ ಅಥಣಿ ಶುಗರ್ಸ್ ಕಾರ್ಖಾನೆಗೂ ರೈತರು ಭೇಟಿ ನೀಡಿದರು. ರೈತ ಮುಖಂಡರೊಂದಿಗೆ ಚರ್ಚೆ ನಡೆಸಿದ ಶ್ರೀಮಂತ ಪಾಟೀಲ, ರೈತರ ಬೇಡಿಕೆ ನ್ಯಾಯಯುತವಾಗಿದ್ದು, ಸರ್ಕಾರ ಸಕ್ಕರೆಗೆ ಕನಿಷ್ಠ ಮಾರಾಟ ಬೆಲೆ ಘೋಷಿಸಬೇಕು ಎಂದು ಒತ್ತಾಯಿಸಿದರು. ರೈತರ ಹೋರಾಟಕ್ಕೆ ತಮ್ಮ ಬೆಂಬಲವಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಕಬ್ಬಿಗೆ ರಾಜ್ಯ ಸಲಹಾ ಬೆಲೆ (ಎಸ್ಎಪಿ) ನಿಗದಿಪಡಿಸುವುದರ ಜೊತೆಗೆ ಸಕ್ಕರೆಗೆ ಕನಿಷ್ಠ ಮಾರಾಟ ಬೆಲೆ ಜಾರಿಗೊಳಿಸಬೇಕು ಎಂಬುದು ರೈತರ ಪ್ರಮುಖ ಬೇಡಿಕೆಯಾಗಿದೆ. ಬೇಡಿಕೆಗಳು ಈಡೇರುವವರೆಗೆ ಸಕ್ಕರೆ ಮಾರಾಟಕ್ಕೆ ಅವಕಾಶ ನೀಡಬಾರದು ಎಂದು ರೈತರು ಪಟ್ಟು ಹಿಡಿದಿದ್ದಾರೆ.
ಅಕ್ಟೋಬರ್ 31ರಂದು ದೊಡ್ಡ ಮಟ್ಟದ ಹೋರಾಟ ಆಯೋಜಿಸಲು ರೈತರು ಸಿದ್ಧತೆ ನಡೆಸಿದ್ದಾರೆ. ಅಷ್ಟರೊಳಗೆ ಕಬ್ಬಿನ ದರ ನಿಗದಿಪಡಿಸಿ, ಸಕ್ಕರೆಗೆ ಕನಿಷ್ಠ ಮಾರಾಟ ಬೆಲೆ ಘೋಷಿಸದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಕಬ್ಬು ಬೆಳೆಗಾರರ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಬೇಕು ಎಂಬ ಒತ್ತಾಯವೂ ಹೆಚ್ಚಾಗಿದೆ.