×
Ad

Bengaluru | ಮೌಲಾನಾ ಮುಹಮ್ಮದ್ ಝೈನುಲ್ ಆಬಿದೀನ್ ರಶಾದಿ ಮಝಾಹಿರಿ ನಿಧನ

Update: 2026-07-09 15:00 IST

ಬೆಂಗಳೂರು : ಬೆಂಗಳೂರಿನ ಪ್ರಮುಖ ಧಾರ್ಮಿಕ, ಶೈಕ್ಷಣಿಕ ಹಾಗೂ ಆಧ್ಯಾತ್ಮಿಕ ವ್ಯಕ್ತಿತ್ವವಾಗಿದ್ದ, ದಾರುಲ್ ಉಲೂಮ್ ಶಾಹ್ ವಲಿಯುಲ್ಲಾಹ್ ಸ್ಥಾಪಕ ಹಾಗೂ ಪ್ರಾಂಶುಪಾಲ ಹಝ್ರತ್ ಮೌಲಾನಾ ಮುಹಮ್ಮದ್ ಝೈನುಲ್ ಆಬಿದೀನ್ ರಶಾದಿ ಮಝಾಹಿರಿ ದೀರ್ಘಕಾಲದ ಅನಾರೋಗ್ಯದ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ ನಿಧನರಾಗಿದ್ದಾರೆ.

ಮೌಲಾನಾ ಅವರು ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು.

ಮೌಲಾನಾ ಅವರು ತಮ್ಮ ಸಂಪೂರ್ಣ ಜೀವನವನ್ನು ಇಸ್ಲಾಮ್ ಧರ್ಮದ ಪ್ರಚಾರ, ಧಾರ್ಮಿಕ ಶಿಕ್ಷಣ, ಸಮಾಜ ಸುಧಾರಣೆ ಸಮರ್ಪಿಸಿದ್ದರು. ಅವರ ಪರಿಶ್ರಮದಿಂದ ದಾರುಲ್ ಉಲೂಮ್ ಶಾಹ್ ವಲಿಯುಲ್ಲಾಹ್ ಬೆಂಗಳೂರಿನ ಪ್ರಮುಖ ಧಾರ್ಮಿಕ ಶಿಕ್ಷಣ ಸಂಸ್ಥೆಯಾಗಿ ಬೆಳೆದಿದೆ. ಅವರ ಮಾರ್ಗದರ್ಶನದಲ್ಲಿ ಅನೇಕ ಉಲಮಾಗಳು, ಹಾಫಿಝ್‌ಗಳು ಶಿಕ್ಷಣ ಪಡೆದು ಇಂದು ಭಾರತ ಹಾಗೂ ವಿದೇಶಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಕರ್ನಾಟಕದ ಅನೇಕ ಧಾರ್ಮಿಕ, ಶೈಕ್ಷಣಿಕ ಮತ್ತು ಸೇವಾ ಸಂಸ್ಥೆಗಳಿಗೆ ಅವರು ಮಾರ್ಗದರ್ಶಕರಾಗಿದ್ದು, ಮುಸ್ಲಿಮ್ ಸಮುದಾಯದ ಏಕತೆ, ಸಂಯಮ, ಪ್ರಾಮಾಣಿಕತೆ ಮತ್ತು ಮಾನವಸೇವೆಯ ಸಂದೇಶವನ್ನು ಸದಾ ಸಾರಿದರು.

ಪ್ರಾಥಮಿಕ ಮಾಹಿತಿಯ ಪ್ರಕಾರ, ಮೌಲಾನಾ ಅವರ ಜನಾಝಾ ನಮಾಝ್ ಇಂದು (ಗುರುವಾರ) ರಾತ್ರಿ 10 ಗಂಟೆಗೆ ಬೆಂಗಳೂರಿನ ಟ್ಯಾನರಿ ರಸ್ತೆಯ ಈದ್ಗಾಹ್ ಮೈದಾನದಲ್ಲಿ ನೆರವೇರಲಿದ್ದು, ನಂತರ ಅಂತ್ಯಸಂಸ್ಕಾರ ನಡೆಯಲಿದೆ.

ಮೌಲಾನಾ ಅವರ ನಿಧನಕ್ಕೆ ವಿವಿಧ ಧಾರ್ಮಿಕ, ಸಾಮಾಜಿಕ ಹಾಗೂ ರಾಜಕೀಯ ನಾಯಕರು ಸಂತಾಪ ಸೂಚಿಸಿದ್ದಾರೆ.

ಅಮಾರತ್-ಎ-ಶರಿಯ್ಯಾ ಕರ್ನಾಟಕ ತನ್ನ ಸಂತಾಪ ಸಂದೇಶದಲ್ಲಿ, "ಮೌಲಾನಾ ಅವರ ನಿಧನವು ಮುಸ್ಲಿಮ್ ಸಮುದಾಯಕ್ಕೆ ಅಪಾರ ನಷ್ಟವಾಗಿದೆ. ಅವರು ತಮ್ಮ ಜೀವನವನ್ನೆಲ್ಲ ಧರ್ಮಸೇವೆ, ಧಾರ್ಮಿಕ ಶಿಕ್ಷಣದ ಅಭಿವೃದ್ಧಿ ಮತ್ತು ಸಮಾಜದ ಮಾರ್ಗದರ್ಶನಕ್ಕೆ ಮೀಸಲಿಟ್ಟಿದ್ದರು" ಎಂದು ಹೇಳಿದೆ.

ಮಾಜಿ ಸಚಿವ ಹಾಗೂ ಹಿರಿಯ ರಾಜಕಾರಣಿ ಆರ್. ರೋಷನ್ ಬೇಗ್ ಅವರು, "ಮೌಲಾನಾ ಮುಹಮ್ಮದ್ ಝೈನುಲ್ ಆಬಿದೀನ್ ರಶಾದಿ ಮಝಾಹಿರಿ ಅವರು ಕೇವಲ ಶ್ರೇಷ್ಠ ಧಾರ್ಮಿಕ ಪಂಡಿತರಷ್ಟೇ ಅಲ್ಲ, ಸಮುದಾಯದ ನೋವನ್ನು ಅರಿತ ನಿಸ್ವಾರ್ಥ ನಾಯಕರು. ಅವರ ಧಾರ್ಮಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಸೇವೆಗಳು ಸದಾ ಸ್ಮರಣೀಯವಾಗಿರುತ್ತವೆ ಎಂದು ಹೇಳಿದರು.

 

ಮೌಲಾನಾ ಮುಹಮ್ಮದ್ ಝೈನುಲ್ ಆಬಿದೀನ್ ಅವರು ಜಮೀಯತ್ ಉಲಮಾ ಹಿಂದ್ ಕರ್ನಾಟಕದ ಉಪಾಧ್ಯಕ್ಷ, ರಾಜ್ಯ ಹಜ್ ಸಮಿತಿಯ ಸದಸ್ಯರಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News