ಆನ್‍ಲೈನ್ ಬೆಟ್ಟಿಂಗ್ | 1,906 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ ಮಾಡಿದ ಈಡಿ ಅಧಿಕಾರಿಗಳು
ಸಾಂದರ್ಭಿಕ ಚಿತ್ರ | Photo Credit : PTI
ಬೆಂಗಳೂರು : ಆನ್‍ಲೈನ್ ಬೆಟ್ಟಿಂಗ್ ಅಪ್ಲಿಕೇಷನ್ ಮೂಲಕ ಸಾರ್ವಜನಿಕರಿಗೆ ಕೋಟ್ಯಾಂತರ ರೂ. ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಸಗಿ ಕಂಪೆನಿಗೆ ಸೇರಿದ 1,906 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಮತ್ತು ಚರಾಸ್ತಿಗಳನ್ನು ಜಾರಿ ನಿರ್ದೇಶನಾಲಯದ(ಈಡಿ) ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಬೆಂಗಳೂರು ಮೂಲದ ಗೇಮ್ಸ್ ಕ್ರಾಫ್ಟ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಅದರ ಪಾಲುದಾರರು ಹಾಗೂ ಸಹವರ್ತಿ ಸಂಸ್ಥೆಗಳಿಗೆ ಸೇರಿದ ಆಸ್ತಿ ಇದಾಗಿದ್ದು, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ, 2002ರ ಅಡಿಯಲ್ಲಿ ವಶಪಡಿಸಿಕೊಳ್ಳಲಾಗಿದೆ.
ಗೇಮ್ಸ್ ಕ್ರಾಫ್ಟ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಹಾಗೂ ರಮ್ಮಿಟೈಮ್ ಸಂಸ್ಥೆಗಳು ರಮ್ಮಿಕಲ್ಚರ್, ರಮ್ಮಿಪ್ರೈಮ್, ಪ್ಲೇಶಿಪ್ ಹಾಗೂ ರಮ್ಮಿಟೈಮ್ ನಂತಹ ಅಪ್ಲಿಕೇಷನ್ ಮೂಲಕ ಸುಮಾರು 3 ಕೋಟಿ ಗ್ರಾಹಕರನ್ನು ಹೊಂದಿದ್ದವು. ಬಳಕೆದಾರರಿಗೆ ತಿಳಿಯದಂತೆ ಆಟದಲ್ಲಿ ಸ್ವಯಂಚಾಲಿತ ಕಂಪ್ಯೂಟರ್ ಪ್ರೋ ಗ್ರಾಂಗಳನ್ನು ಬಳಸಿ ಆಟಗಾರರು ಸೋಲುವಂತೆ ಮಾಡಿ ಅಕ್ರಮ ಲಾಭಗಳಿಸುತ್ತಿದ್ದವು.
ಆನ್‍ಲೈನ್ ಗೇಮಿಂಗ್ ನಿಷೇಧವಿರುವ ತೆಲಂಗಾಣ, ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಆಟಗಾರರನ್ನು ಗುರಿಯಾಗಿಸಿಕೊಂಡು ಶೇ.10 ರಿಂದ ಶೇ.15ರಷ್ಟು ಕಮಿಷನ್ ಪಡೆಯಲಾಗುತ್ತಿತ್ತು. ಆಟಗಾರರನ್ನು ಸೆಳೆಯಲು 1,035 ಕೋಟಿ ರೂ.ಗಳನ್ನು ಜಾಹೀರಾತು ಮತ್ತು ಪ್ರಚಾರಕ್ಕೆ ಬಳಸಲಾಗಿತ್ತು. ಬೋನಸ್ ಹಾಗೂ ಆಕರ್ಷಕ ಆಫರ್‍ಗಳನ್ನು ನೀಡಿ, ಹಣ ಹಿಂಪಡೆಯಲು ಕಠಿಣ ನಿಯಮಗಳನ್ನು ಹೇರಿ ಆಟಗಾರರು ಗೇಮಿಂಗ್ ವ್ಯಸನಕ್ಕೆ ಒಳಗಾಗುವಂತೆ ಮಾಡಲಾಗಿತ್ತು.
ಗಳಿಸಿದ ಅಕ್ರಮ ಹಣವನ್ನು ಶೇರು ಖರೀದಿ ಹಾಗೂ ಆಸ್ತಿಗಳ ಮೇಲಿನ ಹೂಡಿಕೆಗಳ ಮೂಲಕ ವಿವಿಧ ಕಡೆ ರವಾನಿಸಿ ಮರೆಮಾಚಲಾಗಿತ್ತು. ತೆಲಂಗಾಣದಲ್ಲಿ ದಾಖಲಾಗಿದ್ದ ಹಲವು ಎಫ್‍ಐಆರ್ ಆಧಾರದ ಮೇಲೆ ತನಿಖೆ ಆರಂಭಿಸಿದ್ದು, ಪ್ರಸ್ತುತ ಪ್ರಕರಣದ ಮುಂದಿನ ತನಿಖೆ ಮುಂದುವರಿದಿದೆ ಎಂದು ಈಡಿ ಅಧಿಕಾರಿಗಳು ಹೇಳಿದ್ದಾರೆ.