ಜೂ.28 ರಂದೇ ಬಸವಕಲ್ಯಾಣದಲ್ಲಿ ಬಸವಾದಿ ಶಿವಶರಣರ ಬೃಹತ್ ಹಿಂದೂ ಸಮಾವೇಶ ಮಾಡಲಾಗುವುದು : ಗುಂಡುರೆಡ್ಡಿ ಕಮಲಾಪುರೆ
ಬಸವಕಲ್ಯಾಣ: ಜೂ.28ರಂದು ನಡೆಯಲಿರುವ ಬಸವಾದಿ ಶಿವಶರಣರ ಬೃಹತ್ ಹಿಂದೂ ಸಮಾವೇಶಕ್ಕೆ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಗೆ ತಾಲೂಕು ಆಡಳಿತದಿಂದ ಇನ್ನೂ ಅನುಮೋದನೆ ದೊರಕಿಲ್ಲ. ಆದರೂ ಜಿಲ್ಲಾಡಳಿತದ ಮೇಲೆ ಸಂಪೂರ್ಣ ವಿಶ್ವಾಸವಿದ್ದು, ಕಾನೂನಾತ್ಮಕವಾಗಿ ಕಾರ್ಯಕ್ರಮಕ್ಕೆ ಅನುಮತಿ ಸಿಗುವ ನಿರೀಕ್ಷೆಯಿದೆ ಎಂದು ಸಮಾವೇಶದ ಅಧ್ಯಕ್ಷ ಗುಂಡುರೆಡ್ಡಿ ಕಮಲಾಪುರೆ ತಿಳಿಸಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ಕುರಿತು ಅನಗತ್ಯ ಗೊಂದಲಗಳು ಸೃಷ್ಟಿಯಾಗುತ್ತಿರುವ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಲು ಪತ್ರಿಕಾಗೋಷ್ಠಿ ನಡೆಸಲಾಗಿದೆ ಎಂದರು.
ಕಾರ್ಯಕ್ರಮದ ಹೆಸರಿನಲ್ಲಿ ಇರುವ “ಬಸವಾದಿ ಶಿವಶರಣರು” ಎಂಬ ಪದಗಳನ್ನು ತೆಗೆದುಹಾಕಬೇಕು ಎಂದು ಕೆಲ ಸಂಘಟನೆಗಳು ಒತ್ತಾಯಿಸುತ್ತಿವೆ. ಆದರೆ ಈ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವವರಲ್ಲಿ ಬಹುತೇಕರು ಬಸವಕಲ್ಯಾಣದವರೇ ಅಲ್ಲ. ಬಸವಣ್ಣನವರ ವಿಚಾರಧಾರೆಯನ್ನು ಯಾರೂ ಗುತ್ತಿಗೆ ಪಡೆದಿಲ್ಲ. ಬಸವಕಲ್ಯಾಣದ ಜನರಿಂದ ಈ ಕಾರ್ಯಕ್ರಮಕ್ಕೆ ಯಾವುದೇ ವಿರೋಧ ವ್ಯಕ್ತವಾಗಿಲ್ಲ. ಎಲ್ಲಾ ಜಾತಿ-ಧರ್ಮದ ಜನರನ್ನು ಒಗ್ಗೂಡಿಸುವ ಉದ್ದೇಶದಿಂದ ಸಮಾವೇಶ ಆಯೋಜಿಸಲಾಗಿದೆ ಎಂದು ಹೇಳಿದರು.
ಬಸವಣ್ಣನವರು ಸಮಾನತೆಯ ಸಂದೇಶ ಸಾರಿದ ಮಹಾನ್ ವ್ಯಕ್ತಿತ್ವ. ಅವರ ತತ್ವಗಳು ಎಲ್ಲ ಸಮುದಾಯಗಳಿಗೂ ಸೇರಿವೆ. ಇಂತಹ ಕಾರ್ಯಕ್ರಮಗಳಿಗೆ ವಿರೋಧ ವ್ಯಕ್ತಪಡಿಸುವ ಮೂಲಕ ಕೆಲವರು ತಮ್ಮದೇ ಪ್ರತಿಷ್ಠೆಗೆ ಧಕ್ಕೆ ತರುತ್ತಿದ್ದಾರೆ ಎಂದು ಅವರು ಟೀಕಿಸಿದರು.
ಕನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ್ ಸ್ವಾಮೀಜಿ ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ತತ್ವಗಳಿಂದ ಪ್ರೇರಿತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಮಾವೇಶಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹಿಂದೂ ಸಮಾವೇಶವನ್ನು ಭಾರತದಲ್ಲೇ ನಡೆಸಬಾರದೆಂದರೆ ಎಲ್ಲಿ ನಡೆಸಬೇಕು ಎಂದು ಪ್ರಶ್ನಿಸಿದರು.
ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳಿಗೆ ಅಗತ್ಯ ಪೊಲೀಸ್ ಬಂದೋಬಸ್ತ್ ಒದಗಿಸುವುದು ಇಲಾಖೆಯ ಜವಾಬ್ದಾರಿಯಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಜೂ.28ರಂದು ಬಸವಕಲ್ಯಾಣದಲ್ಲಿ ಬಸವಾದಿ ಶಿವಶರಣರ ಬೃಹತ್ ಹಿಂದೂ ಸಮಾವೇಶ ನಿಗದಿಯಂತೆ ನಡೆಯಲಿದ್ದು, ಕನೇರಿ ಮಠದ ಕಾಡಸಿದ್ದೇಶ್ವರ್ ಸ್ವಾಮೀಜಿ ಭಾಗವಹಿಸಲಿದ್ದಾರೆ ಎಂದು ಗುಂಡುರೆಡ್ಡಿ ಕಮಲಾಪುರೆ ತಿಳಿಸಿದರು.
ಈ ಸಂದರ್ಭದಲ್ಲಿ ದೀಪಕ್ ಗಾಯಕವಾಡ್, ಗಿರೀಶ್ ತಾಂಬೋಳೆ, ಸಂದೀಪ್ ಪಾಟಿಲ್ ಸೇರಿದಂತೆ ಹಲವರಿದ್ದರು.