Bidar | ಟಾಟಾ ಪವರ್‌ಗೆ ವಿದ್ಯುತ್ ವಿತರಣಾ ಪರವಾನಿಗೆ ನೀಡದಂತೆ ರೈತ ಸಂಘದಿಂದ ಆಗ್ರಹ
ಕರ್ನಾಟಕ ರಾಜ್ಯ ರೈತ ಸಂಘದ ನೂತನ ಪದಾಧಿಕಾರಿಗಳ ನೇಮಕ
ಬೀದರ್: ಟಾಟಾ ಪವರ್ ಕಂಪನಿ ಲಿಮಿಟೆಡ್‌ಗೆ ಕರ್ನಾಟಕದಲ್ಲಿ ವಿದ್ಯುತ್ ವಿತರಣಾ ಜವಾಬ್ದಾರಿ ನೀಡಬಾರದು. ವಿದ್ಯುತ್ ಕ್ಷೇತ್ರದ ಖಾಸಗೀಕರಣವು ಜನವಿರೋಧಿ ನೀತಿಯಾಗಿದ್ದು, ಸರ್ಕಾರ ಈ ಪ್ರಸ್ತಾವನೆಯನ್ನು ತಿರಸ್ಕರಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಜೆ.ಎಂ. ವೀರಸಂಗಯ್ಯ ಆಗ್ರಹಿಸಿದರು.
ನಗರದ ಮಯೂರಾ ಹೋಟೆಲ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾ ಘಟಕ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮುಂಬೈನ ಟಾಟಾ ಪವರ್ ಕಂಪನಿ ಕರ್ನಾಟಕದ ಸರ್ಕಾರಿ ವಿದ್ಯುತ್ ವಿತರಣಾ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಮಾನಾಂತರವಾಗಿ ವಿದ್ಯುತ್ ವಿತರಣಾ ಸೇವೆ ನೀಡಲು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದು, ಈ ಕುರಿತು ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ. ರಾಜ್ಯದ ವಿದ್ಯುತ್ ಗ್ರಾಹಕರು ಹಾಗೂ ರೈತ ಸಮುದಾಯದ ಪರವಾಗಿ ರೈತ ಸಂಘ ಈ ಪ್ರಸ್ತಾವನೆಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತದೆ ಎಂದು ಹೇಳಿದರು.
ವಿದ್ಯುತ್, ನೀರು ಹಾಗೂ ಇತರೆ ಸಾರ್ವಜನಿಕ ಸೇವಾ ಕ್ಷೇತ್ರಗಳು ಸರ್ಕಾರದ ನಿಯಂತ್ರಣದಲ್ಲಿಯೇ ಇರಬೇಕು. ಲಾಭದ ಉದ್ದೇಶದಿಂದ ಕಾರ್ಯನಿರ್ವಹಿಸುವ ಖಾಸಗಿ ಸಂಸ್ಥೆಗಳಿಗೆ ಇಂತಹ ಮೂಲಭೂತ ಸೇವೆಗಳನ್ನು ಒಪ್ಪಿಸುವುದು ಜನಹಿತಕ್ಕೆ ವಿರುದ್ಧವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಬೀದರ್ ಜಿಲ್ಲೆಯ ಪ್ರತಿಯೊಂದು ಗ್ರಾಮಕ್ಕೂ ತೆರಳಿ ರೈತರಿಂದ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಕಾರ್ಯದರ್ಶಿಗಳಿಗೆ ವೈಯಕ್ತಿಕ ಆಕ್ಷೇಪಣೆ ಸಲ್ಲಿಸುವ ಅಭಿಯಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಜಿಲ್ಲಾ ಕಾರ್ಯದರ್ಶಿಯಾಗಿ ಮಲ್ಲಿಕಾರ್ಜುನ್ ಬಿರಾದಾರ್ ಸಂಗಮಕರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಸಂತೋಷಕುಮಾರ್ ಗುದಗೆ, ಜಿಲ್ಲಾ ಉಪಾಧ್ಯಕ್ಷರಾಗಿ ವಿಠಲರೆಡ್ಡಿ ಆಣದೂರ್, ಖಜಾಂಚಿಯಾಗಿ ಭವರಾವ್ ನೆಲವಾಡೆ ಹಾಗೂ ಕಾರ್ಯದರ್ಶಿಯಾಗಿ ವಿಠಲರಾವ್ ಮೇತ್ರೆ ಅವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ರೈತ ಪ್ರಮುಖರಾದ ಶಾಂತಮ್ಮ ಮೂಲಗೆ, ಶಿವರಾಯ್ ಮುದಾಳೆ, ಕೊಂಡಿಬಾರಾವ್ ಪಾಂಡ್ರೆ, ಷಣ್ಮುಖಪ್ಪ ತೆಗಂಪುರ್, ಖಾಸಿಂ ಅಲಿ ಆಜಾದ್, ಸಚಿನ್ ಪಾಂಡ್ರೆ, ಬಸವ ಅಷ್ಟೂರೆ, ವಿಶ್ವನಾಥ್ ಧರಣೆ, ರಾಜಕುಮಾರ್ ಸ್ವಾಮಿ ಹಾಗೂ ಶಿವಕುಮಾರ್ ಕಾರಬಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.