‘ವಂದೇ ಮಾತರಂ’ಗೆ ಅಗೌರವ ಆರೋಪ: ಬೀದರ್‌ನಲ್ಲಿ ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ

Update: 2026-08-16 19:22 IST

ಬೀದರ್: ‘ವಂದೇ ಮಾತರಂ’ ಗೀತೆಗೆ ಅಗೌರವ ತೋರಿಸಲಾಗಿದೆ ಎಂದು ಆರೋಪಿಸಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಭಾನುವಾರ ಬೀದರ್‌ನ ಕಾಂಗ್ರೆಸ್ ಕಚೇರಿ ಎದುರು ಪ್ರತಿಭಟನೆ ನಡೆಯಿತು. ಪ್ರತಿಭಟನಾಕಾರರು ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರಾದರೂ, ಪೊಲೀಸರು ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಬಂದೋಬಸ್ತ್ ಕೈಗೊಂಡಿದ್ದರಿಂದ ಮುತ್ತಿಗೆ ಪ್ರಯತ್ನವನ್ನು ತಡೆದರು.

ಪ್ರತಿಭಟನೆಯಲ್ಲಿ ಬಿಜೆಪಿ ನಗರ ಅಧ್ಯಕ್ಷ ಹಾಗೂ ನಗರಸಭೆ ಸದಸ್ಯ ಶಶಿ ಹೊಸಳ್ಳಿ ಮಾತನಾಡಿ, ‘ವಂದೇ ಮಾತರಂ’ ಕೇವಲ ಗೀತೆಯಲ್ಲ; ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಕೋಟ್ಯಂತರ ಭಾರತೀಯರಲ್ಲಿ ರಾಷ್ಟ್ರಭಕ್ತಿ ಹಾಗೂ ದೇಶಾಭಿಮಾನದ ಭಾವನೆ ಮೂಡಿಸಿದ ಮಹತ್ವದ ಗೀತೆಯಾಗಿದೆ ಎಂದರು.

ಇಂತಹ ಗೀತೆಗೆ ಅಗೌರವ ತೋರುವ ಯಾವುದೇ ಪ್ರಯತ್ನವನ್ನು ಸಹಿಸಲು ಸಾಧ್ಯವಿಲ್ಲ. ‘ವಂದೇ ಮಾತರಂ’ ಹಾಡುತ್ತಿದ್ದ ಸಂದರ್ಭದಲ್ಲಿ ಕೈ ಸನ್ನೆ ಮೂಲಕ ಅದನ್ನು ನಿಲ್ಲಿಸುವಂತೆ ಸೋನಿಯಾ ಗಾಂಧಿ ಸೂಚಿಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಈ ಘಟನೆ ದೇಶಭಕ್ತರ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ಹೇಳಿದರು.

ಈ ಕುರಿತು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಸ್ಪಷ್ಟನೆ ನೀಡಬೇಕು ಎಂದು ಶಶಿ ಹೊಸಳ್ಳಿ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ರೆಡ್ಡಿ,‌ ಕಾರ್ಯದರ್ಶಿಗಳಾದ ವೀರೇಶ್ ಸ್ವಾಮಿ, ರಮೇಶ್ ಕಲ್ಲೂರ್‌, ರಾಜೇಂದ್ರ ಪೂಜಾರಿ, ಗಣೇಶ್ ಭೋಸ್ಲೆ, ರೋಷನ್ ವರ್ಮಾ, ನಿತಿನ್ ನವಲಕಲೆ, ನರೇಶ್ ಗೌಳಿ, ಸಚಿನ್ ಮಠಪತಿ, ಶರಣು ಸಿದ್ದವೀರ್, ವೀರೇಂದ್ರ ಪಾಟೀಲ್, ಬಾಲಾಜಿ ಪಾಟೀಲ್, ಸತೀಶ್ ಶೇಟಗೊಂಡ, ಶಿವು ಸುಲ್ತಾಪುರೆ, ಸಾಯಿನಾಥ್ ಮಂಗಲಗಿ, ಬಸವ ಮೂಲಗೆ, ಗುರು ಪಂಪಡೇ, ಸಂಜು ಜಿರಗೆ ಹಾಗೂ ರೋಹಿತ್ ಮಂಗಲಗಿ ಸೇರಿದಂತೆ ಬಿಜೆಪಿ ಯುವ ಮೋರ್ಚಾದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News