ಖರ್ಗೆ ರ‍್ಯಾಲಿ ನಡೆಸಿದ 'ಸ್ಥಳ ಶುದ್ಧೀಕರಣ' | ಬೀದರ್‌ನಲ್ಲಿ ಕಾಂಗ್ರೆಸ್ ಪ್ರತಿಭಟನೆ
ಬೀದರ್: ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಉತ್ತರಾಖಂಡದ ರಾಮಲೀಲಾ ಮೈದಾನವನ್ನು ಶುದ್ಧೀಕರಣ ಮಾಡಿರುವ ಘಟನೆಯನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನಗರದಲ್ಲಿ ಭಾನುವಾರ ಪ್ರತಿಭಟನೆ ನಡೆಯಿತು.
ನಗರದ ಅಂಬೇಡ್ಕರ್ ವೃತ್ತದಲ್ಲಿ ಕಾಂಗ್ರೆಸ್‌ನ ನೂರಾರು ಕಾರ್ಯಕರ್ತರು ಜಮಾಯಿಸಿ ಕೇಂದ್ರ ಹಾಗೂ ಉತ್ತರಾಖಂಡ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇಂತಹ ಘಟನೆ ನಾಗರಿಕ ಸಮಾಜವೇ ತಲೆತಗ್ಗಿಸುವಂತದ್ದು ಎಂದು ಪ್ರತಿಭಟನಾಕಾರರು ಹೇಳಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಬೀದರ್ ಸಂಸದ ಸಾಗರ್ ಖಂಡ್ರೆ ಮಾತನಾಡಿ, ಖರ್ಗೆ ಅವರು ದಲಿತ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೆ ಅವರು ಭಾಷಣ ಮಾಡಿದ ಸ್ಥಳವನ್ನು ಶುದ್ಧೀಕರಣ ಮಾಡಲಾಗಿದೆ ಎಂದು ಆರೋಪಿಸಿದರು. ಈ ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತೇವೆ. ಘಟನೆಗೆ ಸಂಬಂಧಿಸಿದ ಕಾರ್ಯಕ್ರಮದ ಆಯೋಜಕರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ದೇಶಕ್ಕೆ ಸ್ವಾತಂತ್ರ್ಯ ದೊರೆತು 80 ವರ್ಷಗಳಾಗಿದ್ದು, ಡಾ. ಬಿ.ಆರ್. ಅಂಬೇಡ್ಕರ್ ಅವರು ದೇಶಕ್ಕೆ ಸಂವಿಧಾನ ನೀಡಿದ್ದಾರೆ. ಸಂವಿಧಾನದ ಆಶಯದಂತೆ ಸಮಾನತೆ ಹಾಗೂ ಅಸ್ಪೃಶ್ಯತೆ ನಿರ್ಮೂಲನೆಗಾಗಿ ಹೋರಾಟ ನಡೆಸಲಾಗುತ್ತಿದೆ. ಆದರೂ ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಸಮಾಜದಲ್ಲಿ ವಿಭಜನೆ ಉಂಟುಮಾಡುವ ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಆರೋಪಿಸಿದರು.
ರಾಜ್ಯಸಭೆಯಲ್ಲಿ ಖರ್ಗೆ ಅವರು ತಮಗೆ ಅನ್ಯಾಯವಾಗಿದೆ ಎಂದು ಧ್ವನಿ ಎತ್ತಿದ್ದರೂ ಸರ್ಕಾರದಿಂದ ಯಾವುದೇ ಸಮರ್ಪಕ ಪ್ರತಿಕ್ರಿಯೆ ಅಥವಾ ಕ್ರಮ ಕೈಗೊಳ್ಳಲಾಗಿಲ್ಲ. ವಿರೋಧ ಪಕ್ಷದ ನಾಯಕರಿಗೇ ಈ ರೀತಿಯ ಪರಿಸ್ಥಿತಿ ಎದುರಾದರೆ, ಸಾಮಾನ್ಯ ಜನರ ಗತಿ ಏನು ಎಂದು ಸಾಗರ್ ಖಂಡ್ರೆ ಪ್ರಶ್ನಿಸಿದರು.
ಘಟನೆಯ ಹೊಣೆ ಹೊತ್ತು ಉತ್ತರಾಖಂಡ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಒತ್ತಾಯಿಸಿದ್ದಾರೆ. ಅದೇ ನಮ್ಮ ಆಗ್ರಹವೂ ಆಗಿದ್ದು, ತಪ್ಪಿತಸ್ಥರನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಕೆ. ಪುಂಡಲಿಕರಾವ್, ವಿಠ್ಠಲದಾಸ್ ಪ್ಯಾಗೆ, ಶ್ರೀಕಾಂತ್ ಸ್ವಾಮಿ, ಅನಿಲಕುಮಾರ್ ಬೇಲ್ದಾರ್, ವಿನೋದ್ ಅಪ್ಪೆ, ಚಂದ್ರಕಾಂತ್ ಹಾಗೂ ಬಸವರಾಜ್ ಮಾಳಗೆ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.