ಹುಲಸೂರು | ಸರ್ಕಾರಿ ಜಾಗ ಒತ್ತುವರಿ ತೆರವಿಗೆ ಆಗ್ರಹಿಸಿ ಗ್ರಾಮಸ್ಥರಿಂದ ಮನವಿ
ಹುಲಸೂರು: ತಾಲೂಕಿನ ಕಾದೇಪುರ ಗ್ರಾಮದ ದಲಿತ ಓಣಿಯಲ್ಲಿ ಸಾರ್ವಜನಿಕ ಬಳಕೆಯಲ್ಲಿರುವ ಸರ್ಕಾರಿ ಜಾಗವನ್ನು ಕೆಲವರು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿರುವ ಗ್ರಾಮಸ್ಥರು, ತಕ್ಷಣ ಒತ್ತುವರಿ ತೆರವುಗೊಳಿಸಿ ಜಾಗವನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಕುರಿತು ಕಾದೇಪುರ ಗ್ರಾಮಸ್ಥರು ಹುಲಸೂರು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಹಾದೇವ ಜಮ್ಮು, ಬಸವಕಲ್ಯಾಣ ಸಹಾಯಕ ಆಯುಕ್ತ ಪ್ರಕಾಶ್ ಕುದುರಿ ಹಾಗೂ ಹುಲಸೂರು ತಹಶೀಲ್ದಾರ್ ಶಿವಾನಂದ ಮೇತ್ರೆ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಕಾದೇಪುರ ಗ್ರಾಮದ ದಲಿತ ಓಣಿಯ ಜನರು ಸುಮಾರು 40ರಿಂದ 50 ವರ್ಷಗಳಿಂದ ಬಳಸಿಕೊಂಡು ಬರುತ್ತಿರುವ ಕೈಪಂಪ್ (ಬೋರ್‌ವೆಲ್) ಇರುವ ಜಾಗವನ್ನು ಸಂತೋಷ್ ಜಾಂಬಳೆ ಎಂಬುವವರು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ. ಅಲ್ಲಿದ್ದ ಸರ್ಕಾರಿ ಬಾವಿಯನ್ನು ಕೂಡ ಮುಚ್ಚಲಾಗಿದ್ದು, ಗ್ರಾಮಸ್ಥರು ಜಮೀನು ಹಾಗೂ ಸ್ಮಶಾನ ಭೂಮಿಗೆ ತೆರಳುವ ಸಾರ್ವಜನಿಕ ರಸ್ತೆಯನ್ನು ಬಂದ್ ಮಾಡಲಾಗಿದೆ ಎಂದು ದೂರಲಾಗಿದೆ.
ಅದೇ ರೀತಿ ದೇವಿದಾಸ್ ಜಾಂಬಳೆ ಎಂಬುವವರು ಕೈಪಂಪ್‌ಗೆ ತೆರಳುವ ರಸ್ತೆಗೆ ಅನಧಿಕೃತವಾಗಿ ಕಟ್ಟೆ ನಿರ್ಮಿಸಿದ್ದು, ಸಾರ್ವಜನಿಕರು ಪ್ರಶ್ನಿಸಿದಾಗ ಆ ಜಾಗ ತಮ್ಮದೆಂದು ಹೇಳುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಸಾರ್ವಜನಿಕರ ಸಂಚಾರ ಹಾಗೂ ಮೂಲಸೌಕರ್ಯ ಬಳಕೆಗೆ ಅಡ್ಡಿಯಾಗಿರುವ ಒತ್ತುವರಿ ಕುರಿತು ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಕೂಡಲೇ ತೆರವುಗೊಳಿಸಬೇಕು. ಇಲ್ಲವಾದಲ್ಲಿ ಸಮಸ್ಯೆ ಬಗೆಹರಿಯುವವರೆಗೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಭಾರತೀಯ ದಲಿತ್ ಪ್ಯಾಂಥರ್ ಖಜಾಂಚಿ ಅಂಕುಶ ಕಾಂಬಳೆ, ಕಾದೇಪುರ್ ಗ್ರಾಮಸ್ಥರಾದ ನಾಗನಾಥ್ ಶಿಂಧೆ, ಗೋಪಾಲ್ ಗಾಯಕವಾಡ್, ರವಿ ಶಿಂಧೆ, ಸುರೇಶ್ ಕಾಂಬಳೆ, ರಾವಸಾಬ್ ಶಿಂಧೆ, ಧೋಂಡಿರಾಮ್ ಗಾಯಕವಾಡ್, ಯಶವಂತ್ ಕಾಂಬಳೆ, ಅನುಸಾಯಬಾಯಿ, ಕಲ್ಪನಾ ಹಾಗೂ ಮಲ್ಲಮ್ಮ ಶಿಂಧೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.