ಜಾನಪದ ಕಲೆ, ಸಂಸ್ಕೃತಿ ಉಳಿಸುವುದು ಪ್ರತಿಯೊಬ್ಬರ ಕರ್ತವ್ಯ: ಸಚಿವ ಈಶ್ವರ್ ಖಂಡ್ರೆ

1,406 ಕಲಾವಿದರಿಗೆ ಗುರುತಿನ ಚೀಟಿ ವಿತರಣೆ

Update: 2026-08-16 19:20 IST

ಬೀದರ್: ನಮ್ಮ ನಾಡಿನ ಕಲೆ, ಸಂಸ್ಕೃತಿ ಹಾಗೂ ಜಾನಪದ ಪರಂಪರೆಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ಕಲಾವಿದರಿಗೆ ಆರ್ಥಿಕ ಭದ್ರತೆ ಕಲ್ಪಿಸುವುದರ ಜೊತೆಗೆ ಅವರ ಪ್ರತಿಭೆಗೆ ಸೂಕ್ತ ಪ್ರೋತ್ಸಾಹ ನೀಡಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಹೇಳಿದರು.

ನಗರದ ಡಾ. ಚನ್ನಬಸವ ಪಟ್ಟದೇವರು ಜಿಲ್ಲಾ ರಂಗಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಶನಿವಾರ ಆಯೋಜಿಸಿದ್ದ ‘ಹರ್ ಘರ್ ತಿರಂಗಾ’ ಹಾಗೂ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಜಿಲ್ಲೆಯ ಕಲಾವಿದರಿಗೆ ಗುರುತಿನ ಚೀಟಿ ವಿತರಣೆ ಸಮಾರಂಭವನ್ನು ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಜಾನಪದ ಸಾಹಿತ್ಯವು ಪೂರ್ವಜರಿಂದ ಬಾಯಿಂದ ಬಾಯಿಗೆ ಹಾಗೂ ತಲೆಮಾರಿನಿಂದ ತಲೆಮಾರಿಗೆ ಹರಿದು ಬಂದಿರುವ ಅಮೂಲ್ಯ ಪರಂಪರೆಯಾಗಿದೆ. ಹಿರಿಯರು ಹಂತಿ ಪದ, ಸೋಬಾನ ಪದ, ತತ್ವಪದ ಸೇರಿದಂತೆ ಹಲವು ಜಾನಪದ ಸಾಹಿತ್ಯ ಪ್ರಕಾರಗಳನ್ನು ರಚಿಸಿ, ಹಾಡುವ ಮೂಲಕ ಸಂಸ್ಕೃತಿಯನ್ನು ಜೀವಂತವಾಗಿಟ್ಟಿದ್ದಾರೆ. ಕಲೆ ದೇವರು ನೀಡಿದ ವರವಾಗಿದ್ದು, ಕಲಾವಿದರನ್ನು ಗೌರವಿಸಿ ಪ್ರೋತ್ಸಾಹಿಸುವುದು ಸಮಾಜದ ಜವಾಬ್ದಾರಿಯಾಗಿದೆ ಎಂದರು.

ಜಿಲ್ಲೆಯ 1,406 ಕಲಾವಿದರಿಗೆ ಗುರುತಿನ ಚೀಟಿ ವಿತರಿಸುತ್ತಿರುವುದು ಶ್ಲಾಘನೀಯ. ಇದರಿಂದ ಕಲಾವಿದರನ್ನು ಗುರುತಿಸುವುದರ ಜೊತೆಗೆ ಸರ್ಕಾರದ ವಿವಿಧ ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು.

ಆಧುನಿಕ ಜೀವನಶೈಲಿಯತ್ತ ಯುವಜನತೆ ಹೆಚ್ಚು ಆಕರ್ಷಿತರಾಗುತ್ತಿರುವುದರಿಂದ ಸಾಂಪ್ರದಾಯಿಕ ಕಲೆ, ಸಂಸ್ಕೃತಿ ಹಾಗೂ ಮೌಲ್ಯಗಳು ನಿಧಾನವಾಗಿ ಮರೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇದನ್ನು ತಡೆಯಲು ಜಾನಪದ ಗೀತೆಗಳು, ತತ್ವಪದಗಳು ಹಾಗೂ ಸತ್ಸಂಗದಂತಹ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಜನರು ಹೆಚ್ಚು ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕಲಾವಿದರ ಬಡಾವಣೆ ನಿರ್ಮಾಣಕ್ಕೆ ಕ್ರಮ :

ವಸತಿ ಸೌಲಭ್ಯವಿಲ್ಲದ ಕಲಾವಿದರು ಅರ್ಜಿ ಸಲ್ಲಿಸಬೇಕು. ಕಲಾವಿದರ ಬಹುದಿನಗಳ ಬೇಡಿಕೆಯಾಗಿರುವ ‘ಕಲಾವಿದರ ಬಡಾವಣೆ’ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಕಲಾವಿದರ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಬದ್ಧವಾಗಿದೆ ಎಂದು ಈಶ್ವರ್ ಖಂಡ್ರೆ ಭರವಸೆ ನೀಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಬುರಗಿ ವಿಭಾಗದ ಜಂಟಿ ನಿರ್ದೇಶಕ ಬಸವರಾಜ್ ಹೂಗಾರ್ ಮಾತನಾಡಿ, ಬೀದರ್ ಶರಣರ ನಾಡಾಗಿದ್ದು, ವಚನ ಸಾಹಿತ್ಯ ಹಾಗೂ ಶರಣ ಪರಂಪರೆಗೆ ವಿಶೇಷ ಸ್ಥಾನವಿದೆ. ಈ ಶ್ರೀಮಂತ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಹಾಗೂ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲೆಯ 1,406 ಕಲಾವಿದರಿಗೆ ಗುರುತಿನ ಚೀಟಿ ವಿತರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಶಾಸಕ ರಹೀಮ್ ಖಾನ್ ಅವರು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಬದೋಲೆ, ಬೀದರ್ ಮಹಾನಗರ ಪಾಲಿಕೆ ಆಯುಕ್ತ ಮುಕುಲ್ ಜೈನ್, ಅಪರ ಜಿಲ್ಲಾಧಿಕಾರಿ ಸುರೇಖಾ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಚಂದ್ರಕಾಂತ್ ಪೂಜಾರಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ಸುರೇಶ್ ಚನ್ನಶೆಟ್ಟಿ, ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯ ವಿಜಯಕುಮಾರ್ ಸೋನಾರೆ ಹಾಗೂ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಂಜೀವಕುಮಾರ್ ಅತಿವಾಳೆ ವೇದಿಕೆಯಲ್ಲಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ್ ಸಿಂಧೆ ಸ್ವಾಗತಿಸಿದರು. ಚನ್ನಬಸವ ಹೇಡೆ ನಿರೂಪಿಸಿದರು. ಕ್ಲೈಮೆಂಟಿನಾ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News