ಔರಾದ್ | ನಕಲಿ ಪತ್ರಕರ್ತರ ವಿರುದ್ಧ ಕ್ರಮಕ್ಕೆ ನೌಕರರ ಸಂಘಗಳ ಆಗ್ರಹ
ಔರಾದ್: ತಾಲೂಕಿನ ಕೆಲ ವ್ಯಕ್ತಿಗಳು ಪತ್ರಕರ್ತರೆಂದು ಹೇಳಿಕೊಂಡು, ವಿವಿಧ ಸಂಘಟನೆಗಳ ಹೆಸರಿನಲ್ಲಿ ಹಾಗೂ ಯೂಟ್ಯೂಬ್ ಚಾನೆಲ್‌ಗಳ ಮೂಲಕ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರಿಗೆ ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿ, ಇಂತಹವರ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ಪಂಚಾಯತ್ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದ್ದಾರೆ.
ತಹಶೀಲ್ದಾರ್ ಅವರ ಮೂಲಕ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೋಮವಾರ ಸಲ್ಲಿಸಿದ ಮನವಿಯಲ್ಲಿ, ಇತ್ತೀಚಿನ ದಿನಗಳಲ್ಲಿ ಕೆಲವರು ಸುಳ್ಳು ಆರೋಪಗಳನ್ನು ಮಾಡುವುದು, ಬ್ಲಾಕ್‌ಮೇಲ್ ಮೂಲಕ ಹಣ ವಸೂಲಿ ಮಾಡಲು ಯತ್ನಿಸುವುದು ಹಾಗೂ ವೈಯಕ್ತಿಕ ಸ್ವಾರ್ಥಕ್ಕಾಗಿ ಮಾಧ್ಯಮವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದು ಕಂಡು ಬರುತ್ತಿದೆ ಎಂದು ಆರೋಪಿಸಲಾಗಿದೆ.
ಇಂತಹ ಚಟುವಟಿಕೆಗಳಿಂದ ಸರ್ಕಾರಿ ನೌಕರರು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದು, ನೈಜ ಪತ್ರಕರ್ತರ ಗೌರವ ಹಾಗೂ ಪತ್ರಿಕೋದ್ಯಮದ ವಿಶ್ವಾಸಾರ್ಹತೆಗೆ ಧಕ್ಕೆಯಾಗುತ್ತಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಸಮಾಜದ ನಾಲ್ಕನೇ ಅಂಗವಾದ ಪತ್ರಿಕೋದ್ಯಮವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿರುವ ನೈಜ ಪತ್ರಕರ್ತರು ಜನರ ಸಮಸ್ಯೆಗಳನ್ನು ಬೆಳಕಿಗೆ ತರುವುದರ ಜೊತೆಗೆ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಕಾರ್ಯ ಮಾಡುತ್ತಿದ್ದಾರೆ. ಆದರೆ ಕೆಲ ನಕಲಿ ಪತ್ರಕರ್ತರು, ಕೆಲವು ಸಂಘಟನೆಗಳ ಹೆಸರಿನಲ್ಲಿ ಕಾರ್ಯನಿರ್ವಹಿಸುವವರು ಹಾಗೂ ಸ್ವಯಂಘೋಷಿತ ಸಮಾಜ ಸೇವಕರ ವರ್ತನೆಯಿಂದ ಅಧಿಕಾರಿಗಳು ಮತ್ತು ನೌಕರರು ಒತ್ತಡಕ್ಕೆ ಸಿಲುಕುತ್ತಿದ್ದಾರೆ ಎಂದು ದೂರಲಾಗಿದೆ.
ತಾಲೂಕಿನಲ್ಲಿ ನಕಲಿ ಪತ್ರಕರ್ತರ ಹೆಸರಿನಲ್ಲಿ ಕಿರುಕುಳ, ಬ್ಲಾಕ್‌ಮೇಲ್ ಹಾಗೂ ಹಣ ವಸೂಲಾತಿ ನಡೆಸುತ್ತಿರುವವರ ವಿರುದ್ಧ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆಗಳ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಪಂಚಾಯತ್ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಸಂತೋಷ್ ಪಾಟೀಲ್, ಸರಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಪಂಡರಿ ಆಡೆ, ಶಿವಕುಮಾರ್ ಘಾಟೆ, ಪ್ರಾಥಮಿಕ ನೌಕರರ ಸಂಘದ ತಾಲೂಕಾಧ್ಯಕ್ಷ ಗಜಾನಂದ್ ಮಳ್ಳಾ, ನಾಗೇಶ್ ಮುಕ್ರಂಬೆ, ಸಂಗಾರೆಡ್ಡಿ, ನಂದಕಿಶೋರ್ ಶಾಸ್ತ್ರೀ, ಶರಣಪ್ಪ ನಾಗಲಗಿದ್ದೆ, ನರಸಿಂಗ್ ಮಾನೆ, ಕೃಷ್ಣ ರಾಠೋಡ್, ಅನಿಲಲ್ ಪಾಟೀಲ್, ದತ್ತಾತ್ರೇಯ ಪಾಟೀಲ್, ದಿನೇಶ್ ರೆಡ್ಡಿ, ಆತ್ಮರಾಮ್, ಸುಭಾಷ್ ಭುಯ್ಯ, ಮಲ್ಲಿಕಾರ್ಜುನ್ ಪಾಟೀಲ್, ರಮೇಶ್ ಹಾಗೂ ವಿಜಯಲಕ್ಷ್ಮಿ ಪಾಟೀಲ್ ಸೇರಿದಂತೆ ಇತರರು ಇದ್ದರು.