ಭಾಲ್ಕಿ ತಾಲೂಕು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಜೈರಾಜ್ ಪಾತ್ರೆ ಆಯ್ಕೆ
ಭಾಲ್ಕಿ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಭಾಲ್ಕಿ ತಾಲೂಕು ಘಟಕದ ಅಧ್ಯಕ್ಷರಾಗಿ ಜೈರಾಜ್ ಪಾತ್ರೆ ಆಯ್ಕೆಯಾಗಿದ್ದು, ಪ್ರಧಾನ ಕಾರ್ಯದರ್ಶಿಯಾಗಿ ಸಂತೋಷ್ ಬಿ.ಜಿ. ಪಾಟೀಲ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಭಾಲ್ಕಿ ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ನೂತನವಾಗಿ ಆಯ್ಕೆಯಾದ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿಯವರಿಗೆ ಸನ್ಮಾನಿಸಿ ಮಾತನಾಡಿದ ನಾಡೋಜ ಡಾ.ಬಸವಲಿಂಗ ಪಟ್ಟದೇವರು, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘವು ತನ್ನದೇ ಆದ ಗೌರವಯುತ ಇತಿಹಾಸ ಮತ್ತು ಸಾಮಾಜಿಕ ಬದ್ಧತೆಯನ್ನು ಹೊಂದಿದ್ದು, ಪತ್ರಕರ್ತರು ಸದಾ ಸತ್ಯ, ನಿಷ್ಪಕ್ಷಪಾತತೆ ಹಾಗೂ ಜನಪರ ಮೌಲ್ಯಗಳಿಗೆ ಬದ್ಧರಾಗಿ ಕಾರ್ಯನಿರ್ವಹಿಸುವ ಮೂಲಕ ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದರು.
ಪತ್ರಿಕೋದ್ಯಮವು ಕೇವಲ ವೃತ್ತಿಯಲ್ಲ. ಅದು ಸಮಾಜದ ಜವಾಬ್ದಾರಿಯಾಗಿದೆ. ಪತ್ರಕರ್ತರು ಸತ್ಯ ಮತ್ತು ನ್ಯಾಯಸಮ್ಮತ ಸುದ್ದಿಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಸಮಾಜದ ಒಳಿತಿಗಾಗಿ ಕಾರ್ಯನಿರ್ವಹಿಸುವ ಪತ್ರಕರ್ತರು ಸದಾ ಜನರ ವಿಶ್ವಾಸ ಗಳಿಸುತ್ತಾರೆ ಎಂದು ಗುರುಬಸವ ಪಟ್ಟದೇವರು ಅಭಿಪ್ರಾಯ ವ್ಯಕ್ತಪಡಿಸಿದರು.
ನೂತನವಾಗಿ ಆಯ್ಕೆಯಾದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದ ಅಧ್ಯಕ್ಷ ಜೈರಾಜ್ ಪಾತ್ರೆ ಹಾಗೂ ಪ್ರಧಾನ ಕಾರ್ಯದರ್ಶಿ ಸಂತೋಷ ಬಿ.ಜಿ ಪಾಟೀಲ್ ಅವರಿಗೆ ನಾಡೋಜ ಡಾ. ಬಸವಲಿಂಗ ಪಟ್ಟದೇವರು ಮತ್ತು ಗುರುಬಸವ ಪಟ್ಟದೇವರು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಅಶೋಕ್ ರಾಜೋಳೆ, ವಿಜಯಕುಮಾರ್ ಪರ್ಮಾ, ಚಂದ್ರಕಾಂತ್ ಬಿರಾದಾರ್, ರಾಜೇಶ್ ಮುಗಟೆ, ಮಲ್ಲಿಕಾರ್ಜುನ್ ಪಾಟೀಲ್, ಭದ್ರೇಶ್ ಸ್ವಾಮಿ, ಮಾಣಿಕ ಮರಖಲೆ, ದೀಪಕ್ ಠಮಕೆ, ದಿಲೀಪ್ ಶೇರಿಕಾರ್, ಶಾಂತಯ್ಯಾ ಸ್ವಾಮಿ ಹಾಗೂ ಚಂದ್ರಕಾಂತ್ ತಳವಾಡೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.