ಮಣ್ಣಿನಲ್ಲಿರುವ ಸೂಕ್ಷ್ಮಜೀವಿಗಳನ್ನು ರಕ್ಷಿಸಿ, ಭೂಮಿಯ ದೀರ್ಘಕಾಲದ ಉತ್ಪಾದಕತೆ ಮರಳಿ ಪಡೆಯಬಹುದು : ಡಾ.ರಾಜಶೇಖರ್ ಬಸನಾಯಕ್
ಬೀದರ್ : ಅತಿಯಾದ ರಾಸಾಯನಿಕ ಗೊಬ್ಬರಗಳ ಬಳಕೆಯಿಂದಾಗಿ ಮಣ್ಣಿನ ನೈಸರ್ಗಿಕ ಗುಣಮಟ್ಟ ಹಾಳಾಗುತ್ತಿದೆ. ರೈತರು ನಿಯಮಿತವಾಗಿ ಮಣ್ಣು ಪರೀಕ್ಷೆ ಮಾಡಿಸಬೇಕು. ಹಸಿರು ಗೊಬ್ಬರ, ಕಾಂಪೋಸ್ಟ್ ತರಹದ ಸಾವಯವ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದರಿಂದ ಮಣ್ಣಿನಲ್ಲಿರುವ ಸೂಕ್ಷ್ಮಜೀವಿಗಳನ್ನು ರಕ್ಷಿಸಿ, ಭೂಮಿಯ ದೀರ್ಘಕಾಲದ ಉತ್ಪಾದಕತೆಯನ್ನು ಮರಳಿ ಪಡೆಯಬಹುದು ಎಂದು ಬೀದರ್ ನ ಐಸಿಎಆರ್–ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ರಾಜಶೇಖರ್ ಬಸನಾಯಕ್ ಅವರು ರೈತರಿಗೆ ಕಿವಿಮಾತು ಹೇಳಿದರು.
ಜಿಲ್ಲೆಯ ಚಿಕಪೇಟ್, ಮರ್ಕಲ್‌ನಲ್ಲಿ ಇತ್ತೀಚಿನ ಖೇತಿ ಬಚಾವೋ ಆಂದೋಲನ ಅಭಿಯಾನವನ್ನು ರೈತ ಸಮುದಾಯಕ್ಕೆ ವೈಜ್ಞಾನಿಕ, ಸುಸ್ಥಿರ ಮತ್ತು ಕಡಿಮೆ ವೆಚ್ಚದ ಕೃಷಿ ಪದ್ಧತಿಗಳ ಬಗ್ಗೆ ಜಾಗೃತಿ ಮೂಡಿಸಿ ಅವರು ಮಾತನಾಡಿದರು.
ತೀವ್ರವಾಗಿ ಕಾಡುತ್ತಿರುವ ಮಣ್ಣಿನ ಸವೆತ ಹಾಗೂ ಫಲವತ್ತತೆ ಕುಸಿತದ ಸಮಸ್ಯೆಯ ಬಗ್ಗೆ ಅತಿಯಾದ ರಾಸಾಯನಿಕ ಗೊಬ್ಬರಗಳ ಬಳಕೆಯಿಂದಾಗಿ ಮಣ್ಣಿನ ನೈಸರ್ಗಿಕ ಗುಣಮಟ್ಟ ಹಾಳಾಗುತ್ತಿದೆ. ರೈತರು ನಿಯಮಿತವಾಗಿ ಮಣ್ಣು ಪರೀಕ್ಷೆ ಮಾಡಿಸಬೇಕು. ಹಸಿರು ಗೊಬ್ಬರ, ಕಾಂಪೋಸ್ಟ್ ತರಹದ ಸಾವಯವ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದರಿಂದ ಮಣ್ಣಿನಲ್ಲಿರುವ ಸೂಕ್ಷ್ಮಜೀವಿಗಳನ್ನು ರಕ್ಷಿಸಿ, ಭೂಮಿಯ ದೀರ್ಘಕಾಲದ ಉತ್ಪಾದಕತೆಯನ್ನು ಮರಳಿ ಪಡೆಯಬಹುದು ಎಂದು ಸಲಹೆ ನೀಡಿದರು.
ವಿಜ್ಞಾನಿ ಡಾ. ಶಿವಕುಮಾರ್ ಅವರು ಮಾತನಾಡಿ, ಕೀಟ ಮತ್ತು ರೋಗಗಳ ನಿಯಂತ್ರಣಕ್ಕಾಗಿ ಜೈವಿಕ ಹಾಗೂ ನೈಸರ್ಗಿಕ ಮಾರ್ಗಗಳನ್ನು ಅನುಸರಿಸಬೇಕು. ದುಬಾರಿ ಹಾಗೂ ವಿಷಕಾರಿ ರಾಸಾಯನಿಕಗಳ ಬಳಕೆಯನ್ನು ಕಡಿಮೆ ಮಾಡಿ, ಜೀವವೈವಿಧ್ಯವನ್ನು ರಕ್ಷಿಸುವ ನೈಸರ್ಗಿಕ ಸೂತ್ರಗಳನ್ನು ಅಳವಡಿಸಿಕೊಳ್ಳಲು ಉತ್ತೇಜಿಸಬೇಕು ಎಂದು ತಿಳಿಸಿದರು. ಪರಿಸರ ಸ್ನೇಹಿ ಬೆಳೆ ಸಂರಕ್ಷಣಾ ವಿಧಾನಗಳ ಬಗ್ಗೆ ಸುದೀರ್ಘ ಮಾಹಿತಿ ನೀಡಿ, ಸ್ಥಳೀಯವಾಗಿ ಸಿಗುವ ಸಸ್ಯ ಸಾಮಗ್ರಿಗಳಿಂದ ಕಷಾಯ ಹಾಗೂ ಜೈವಿಕ ಕೀಟನಾಶಕಗಳನ್ನು ತಯಾರಿಸುವ ವಿಧಾನದ ಬಗ್ಗೆ ಅವರು ವಿವರಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ಪ್ರಮುಖ ನಾಯಕರಾದ ಶಂಕರಣ್ಣ ಪಾರಾ ಮತ್ತು ವೈಜಿನಾಥ್ ಬುಯ್ಯ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಅಪಾರ ಸಂಖ್ಯೆಯ ಪ್ರಗತಿಪರ ರೈತರು ಉಪಸ್ಥಿತರಿದ್ದರು.