ಮೊಬೈಲ್ ಗೀಳು ಹೆಚ್ಚಾಗಿ ಪುಸ್ತಕ ಓದುವ ಸಂಸ್ಕೃತಿಯಿಂದ ವಿಮುಖರಾಗುತ್ತಿದ್ದೇವೆ : ಶೈಲಜಾ ಹುಡಗೆ
ಬೀದರ್ : ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣದ ಗೀಳು ಹೆಚ್ಚಾಗುತ್ತಿದ್ದು, ಪುಸ್ತಕ ಓದುವ ಸಂಸ್ಕೃತಿಯಿಂದ ನಾವು ವಿಮುಖರಾಗುತ್ತಿದ್ದೇವೆ ಎಂದು ಸಾಹಿತಿ ಶೈಲಜಾ ಹುಡಗೆ ಅವರು ಅಭಿಪ್ರಾಯಪಟ್ಟರು.
ನಗರದ ಬಸವನಗರ ಬಡಾವಣೆಯ ಪ್ರೊ. ಸಿದ್ರಾಮಪ್ಪಾ ಮಾಸಿಮಾಡೆ ಅವರ ನಿವಾಸದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು, ಜಿಲ್ಲಾ ಜಾಗೃತ ಸಮಿತಿಯ ಸಹಯೋಗದಲ್ಲಿ ಶನಿವಾರ ಸಾಯಂಕಾಲ ಆಯೋಜಿಸಿದ ಮನೆಗೊಂದು ಗ್ರಂಥಾಲಯ ಅನುಷ್ಠಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಪುಸ್ತಕಗಳು ನಮ್ಮ ಉತ್ತಮ ಸ್ನೇಹಿತರು ಇದ್ದಂತೆ. ಎಲ್ಲರ ಮನೆಯಲ್ಲಿ ದೇವರ ಕೋಣೆ ಇದ್ದಂತೆ ಪ್ರತಿ ಮನೆಯಲ್ಲಿ ಗ್ರಂಥಾಲಯ ಸ್ಥಾಪನೆಯಾಗಬೇಕು. ಗ್ರಂಥಾಲಯ ಮನೆಯ ಶಾಂತಿ, ಸೌಹಾರ್ದತೆ ಹಾಗೂ ನೆಮ್ಮದಿ ನೆಲೆಸುವಂತೆ ಮಾಡುತ್ತದೆ. ಮಾನವನ ಬದುಕನ್ನು ಬದಲಾವಣೆ ಮಾಡುವ ಶಕ್ತಿ ಪುಸ್ತಕಗಳಿಗೆ ಇದೆ. ಪುಸ್ತಕಗಳನ್ನು ಓದುವುದರಿಂದ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಉತ್ತಮ ಪ್ರಜೆಯಾಗಲು ಸಹಕಾರಿಯಾಗುತ್ತವೆ ಎಂದರು.
ನಿವೃತ್ತ ಬ್ಯಾಂಕ್ ಅಧಿಕಾರಿ ಭಗವಂತಪ್ಪ ಅಣ್ಣೆಪ್ಪನೋರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಉರ್ದು, ಮರಾಠಿ ಪ್ರಭಾವದಿಂದಾಗಿ ಬೀದರ್ ಜಿಲ್ಲೆಯಲ್ಲಿ ಹೆಚ್ಚಾಗಿ ಕನ್ನಡ ವಾತಾವರಣ ಇರಲಿಲ್ಲ. ಅಂದಿನ ದಿನಗಳಲ್ಲಿ ಪ್ರಭುರಾವ್ ಕಂಬಳಿವಾಲೆ, ಪಂಚಾಕ್ಷರಿ ಪುಣ್ಯಶೆಟ್ಟಿ ಸೇರಿದಂತೆ ಹಲವಾರು ಸಾಹಿತಿ-ಸಂಘಟಕರು ಈ ಭಾಗದಲ್ಲಿ ನಾಡು-ನುಡಿಗಾಗಿ ಸಂಘರ್ಷ ನಡೆಸಿ ಎಲ್ಲೆಡೆ ಕನ್ನಡಮಯ ವಾತಾವರಣ ನಿರ್ಮಿಸಿದರು. ಅನ್ಯ ಭಾಷೆಗಳ ಪ್ರಭಾವದ ಮಧ್ಯೆಯೂ ಕನ್ನಡ ಸಾಹಿತ್ಯ, ಸಂಸ್ಕೃತಿ ಉಳಿವಿಗಾಗಿ ಕೈಜೋಡಿಸಬೇಕಿದೆ. ಮನೆ-ಮನೆಗಳಲ್ಲಿ ಗ್ರಂಥಾಲಯ ಸ್ಥಾಪನೆಯಾದರೆ ಎಲ್ಲರಲ್ಲೂ ಓದಿನ ಆಸಕ್ತಿ ತನ್ನಿಂದ ತಾನೇ ಹೆಚ್ಚುತ್ತದೆ ಎಂದು ಹೇಳಿದರು.
ಜಿಲ್ಲಾ ಜಾಗೃತ ಸಮಿತಿ ಸಂಚಾಲಕ ಬಾಲಾಜಿ ಕುಂಬಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಮನೆಗಳಲ್ಲಿ ಪುಸ್ತಕ ಓದುವ ಸಂಸ್ಕೃತಿ ಹೆಚ್ಚಿಸುವ ಉದ್ದೇಶದಿಂದ ರಾಜ್ಯದ ಒಂದು ಲಕ್ಷ ಮನೆಗಳಲ್ಲಿ ಗ್ರಂಥಾಲಯಗಳನ್ನು ಸ್ಥಾಪಿಸುವುದು ಕನ್ನಡ ಪುಸ್ತಕ ಪ್ರಾಧಿಕಾರದ ಮುಖ್ಯ ಗುರಿಯಾಗಿದೆ. ಗ್ರಂಥಾಲಯಗಳ ಅನುಕೂಲಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಜಿಲ್ಲಾದ್ಯಂತ ನಿರಂತರವಾಗಿ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.
ವಚನಾಮೃತ ಕನ್ನಡ ಸಂಘದ ಅಧ್ಯಕ್ಷ ಪ್ರೊ.ಸಿದ್ರಾಮಪ್ಪ ಮಾಸಿಮಾಡೆ ಅವರು ಮಾತನಾಡಿ, ಆಧುನಿಕ ತಂತ್ರಜ್ಞಾನದ ಭರಾಟೆಯಲ್ಲಿ ಯುವ ಸಮೂಹವನ್ನು ಓದಿಗೆ ಅಣಿಗೊಳಿಸುವುದು ಇಂದಿನ ಅಗತ್ಯವಾಗಿದೆ. ಕನ್ನಡ ಪುಸ್ತಕ ಪ್ರಾಧಿಕಾರದ ಮನೆಗೊಂದು ಗ್ರಂಥಾಲಯ ಯೋಜನೆಯು ವಿದ್ಯಾರ್ಥಿ, ಯುವ ತಲೆಮಾರಿನಲ್ಲಿ ಓದಿನ ಅಭಿರುಚಿ ಹೆಚ್ಚಿಸುವ ಜೊತೆಗೆ ಗ್ರಂಥಾಲಯಗಳ ಸ್ಥಾಪನೆಗೆ ಪ್ರೇರಣಾದಾಯಕವಾಗಿದೆ ಎಂದು ನುಡಿದರು.
ಈ ಸಂದರ್ಭದಲ್ಲಿ ಮನೆಗೊಂದು ಗ್ರಂಥಾಲಯದ ಜಿಲ್ಲಾ ಜಾಗೃತ ಸಮಿತಿ ಸದಸ್ಯೆ ಜಯದೇವಿ ಯದಲಾಪುರೆ, ಲಕ್ಷ್ಮಣ್ ಮೇತ್ರೆ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಂಜೀವಕುಮಾರ್ ಅತಿವಾಳೆ, ಸುನೀತಾ ಮಾಸಿಮಾಡೆ, ಬಸವರಾಜ್ ಸ್ವಾಮಿ, ಬಿ.ಎಸ್.ಬಿರಾದರ್, ಎಸ್.ಎಸ್.ಹೊದಮನಿ, ರೇಣುಕಾ ಎನ್.ಬಿ., ಉಮಾದೇವಿ ಕಮಠಾಣೆ, ಅಶೋಕ್ ಮಾಶೆಟ್ಟಿ ಸೇರಿದಂತೆ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು. ಶಿಕ್ಷಕ ಪರಮೇಶ್ವರ್ ಬಿರಾದರ್ ಸ್ವಾಗತಿಸಿದರು. ಸಾಹಿತಿ ಸ್ವರೂಪರಾಣಿ ನಾಗೂರೆ ನಿರೂಪಿಸಿ, ವಂದಿಸಿದರು.