Aurad | ಗ್ರಾಮೀಣ ರಸ್ತೆಗಳ ದುರಸ್ತಿಗೆ ಸಚಿವ ಖಂಡ್ರೆಗೆ ಶಾಸಕ ಪ್ರಭು ಚವ್ಹಾಣ್ ಮನವಿ
ಔರಾದ್: ಕಮಲನಗರ ಹಾಗೂ ಔರಾದ್ ತಾಲ್ಲೂಕುಗಳಲ್ಲಿ ಕಳೆದ ವರ್ಷದ ಭಾರೀ ಮಳೆಯಿಂದ ಹಾನಿಗೊಳಗಾದ ಗ್ರಾಮೀಣ ರಸ್ತೆಗಳನ್ನು ತುರ್ತಾಗಿ ದುರಸ್ತಿಪಡಿಸುವಂತೆ ಶಾಸಕ ಪ್ರಭು ಚವ್ಹಾಣ್ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ಸಚಿವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ ಶಾಸಕ ಪ್ರಭು ಚವ್ಹಾಣ್, ಕ್ಷೇತ್ರದ ಹಲವು ಗ್ರಾಮೀಣ ರಸ್ತೆಗಳು ಮಳೆಯಿಂದ ತೀವ್ರ ಹಾನಿಗೊಳಗಾಗಿ ಗುಂಡಿಮಯವಾಗಿವೆ. ಇದರಿಂದ ಸಾರ್ವಜನಿಕರು, ವಿದ್ಯಾರ್ಥಿಗಳು, ರೈತರು ಹಾಗೂ ವಾಹನ ಸವಾರರು ಪ್ರತಿನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ತುರ್ತು ವೈದ್ಯಕೀಯ ಸೇವೆಗೆ ಆಸ್ಪತ್ರೆಗೆ ತೆರಳುವ ರೋಗಿಗಳು, ಶಾಲಾ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಹಾಗೂ ರೈತರು ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸಲು ರಸ್ತೆ ದುಸ್ಥಿತಿಯಿಂದ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಅವರು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಸಾರ್ವಜನಿಕರ ಬೇಡಿಕೆಯಿರುವ ಫಾರ್ಮೇಶನ್ ರಸ್ತೆಗಳನ್ನು ನಿರ್ಮಿಸಿಕೊಡಬೇಕು. ಈ ಕುರಿತು ತಾಲ್ಲೂಕು ಪಂಚಾಯಿತಿ ಅಧಿಕಾರಿಗಳ ಗಮನಕ್ಕೂ ತರಲಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ನಿರ್ದೇಶನ ನೀಡುವಂತೆ ಸಚಿವರಲ್ಲಿ ಕೋರಿದ್ದಾರೆ.
ವಿಧಾನಸಭಾ ಅಧಿವೇಶನದಲ್ಲಿಯೂ ಕ್ಷೇತ್ರದ ರಸ್ತೆ ದುರಸ್ತಿ ಮತ್ತು ಅಭಿವೃದ್ಧಿ ಕುರಿತು ಒತ್ತಾಯಿಸಿದ್ದೇನೆ. ಪ್ರಸಕ್ತ ಮಳೆಗಾಲದಲ್ಲಿ ರಸ್ತೆಗಳ ಪರಿಸ್ಥಿತಿ ಇನ್ನಷ್ಟು ಹದಗೆಡುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ತುರ್ತು ಆದ್ಯತೆಯ ಮೇರೆಗೆ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಶಾಸಕ ಪ್ರಭು ಚವ್ಹಾಣ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.