ಬೀದರ್: ಪ್ರವಾದಿ ಮುಹಮ್ಮದ್ (ಸ) ಅವರ ಜನ್ಮದಿನದ ಅಂಗವಾಗಿ ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ಆಗಸ್ಟ್ 26ರಿಂದ ಸೆಪ್ಟೆಂಬರ್ 6ರವರೆಗೆ ಜಿಲ್ಲೆಯಾದ್ಯಂತ ‘ಕ್ರಾಂತಿಯ ಜ್ಯೋತಿ – ಪ್ರವಾದಿ ಮುಹಮ್ಮದ್ (ಸ)’ ಶೀರ್ಷಿಕೆಯಡಿ ಸೀರತ್ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಜಮಾಅತೆ ಇಸ್ಲಾಮಿ ಹಿಂದ್‌ನ ರಾಜ್ಯ ಸಲಹಾ ಮಂಡಳಿ ಸದಸ್ಯ ಮುಹಮ್ಮದ್ ಆಸಿಫುದ್ದೀನ್ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರವಾದಿ ಮುಹಮ್ಮದ್ (ಸ) ಅವರ ಜೀವನ, ಸಂದೇಶ ಮತ್ತು ಮಾನವೀಯ ಮೌಲ್ಯಗಳನ್ನು ಜನರಿಗೆ ಪರಿಚಯಿಸುವ ಉದ್ದೇಶದಿಂದ ರಾಜ್ಯದಾದ್ಯಂತ ನಡೆಯುತ್ತಿರುವ ಈ ಅಭಿಯಾನವನ್ನು ಬೀದರ್ ಜಿಲ್ಲೆಯಲ್ಲಿಯೂ ವಿವಿಧ ಕಾರ್ಯಕ್ರಮಗಳ ಮೂಲಕ ನಡೆಸಲಾಗುತ್ತಿದೆ ಎಂದು ಹೇಳಿದರು.

ಅಭಿಯಾನದ ಅಂಗವಾಗಿ ಬೀದರ್ ನಗರದಲ್ಲಿ ಹಲವು ಧಾರ್ಮಿಕ, ಸಾಹಿತ್ಯ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅಭಿಯಾನದ ಅವಧಿಯ ಎರಡೂ ಶುಕ್ರವಾರ ಮಸೀದಿಗಳಲ್ಲಿ ವಿಶೇಷ ಪ್ರವಚನಗಳು ನಡೆಯಲಿವೆ. ಜೊತೆಗೆ ಸಾಹಿತಿ ಯೋಗೇಶ್ ಮಾಸ್ಟರ್ ಅವರ ‘ಮಾನವ ಮನಸ್ಸಿನ ಕೃಷಿಕ – ಮನದೊಡೆಯ ಮುಹಮ್ಮದ್ (ಸ)’ ಹಾಗೂ ಅಬ್ದುಸ್ಸಲಾಮ್ ಪುತ್ತಿಗೆ ಅವರ ‘ಸಮಗ್ರ ಕ್ರಾಂತಿಯ ಜ್ಯೋತಿ ಬೆಳಗಿದ ಪೈಗಂಬರ್ ಮುಹಮ್ಮದ್ (ಸ)’ ಕೃತಿಗಳನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

ಜಮಾಅತೆ ಇಸ್ಲಾಮಿ ಹಿಂದ್‌ನ ಮಾಧ್ಯಮ ಉಪ ಸಂಚಾಲಕ ಮುಹಮ್ಮದ್ ನಿಝಾಮುದ್ದೀನ್ ಕಾರ್ಯಕ್ರಮಗಳ ವಿವರ ನೀಡಿ, ಆಗಸ್ಟ್ 26ರಂದು ಬೀದರ್ ಕೇಂದ್ರ ಕಾರಾಗೃಹದ ಕೈದಿಗಳಿಗೆ ಹಣ್ಣು-ಹಂಪಲು ವಿತರಣೆ, ಆಗಸ್ಟ್ 30ರಂದು ಕರ್ನಾಟಕ ಸಾಹಿತ್ಯ ಸಂಘದ ಸಭಾಂಗಣದಲ್ಲಿ ಬಹುಭಾಷಾ ಕವಿಗೋಷ್ಠಿ ಹಾಗೂ ಸೆಪ್ಟೆಂಬರ್ 9ರಂದು ಇದೇ ಸಭಾಂಗಣದಲ್ಲಿ ಮೇಜಿನ ಮಾತು ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.

ಇದಲ್ಲದೆ ಸಾರ್ವಜನಿಕರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಪ್ರವಾದಿ ಮುಹಮ್ಮದ್ (ಸ) ಅವರ ಜೀವನ ಮತ್ತು ಸೀರತ್ ಕುರಿತ ಪುಸ್ತಕಗಳನ್ನು ವಿತರಿಸಲಾಗುವುದು ಎಂದು ತಿಳಿಸಿದರು.

ಸೆಪ್ಟೆಂಬರ್ 6ರಂದು ನಗರದ ವಿಸ್ಡಮ್ ಕಾಲೇಜಿನಲ್ಲಿ 8ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ‘ಸಾಮಾಜಿಕ ಕ್ರಾಂತಿಯ ಜ್ಯೋತಿ – ಪ್ರವಾದಿ ಮುಹಮ್ಮದ್ (ಸ)’ ಹಾಗೂ ಪಿಯುಸಿ ಮತ್ತು ಪದವಿ ವಿದ್ಯಾರ್ಥಿಗಳಿಗೆ ‘ಆರ್ಥಿಕ ಕ್ರಾಂತಿಯ ಜ್ಯೋತಿ – ಪ್ರವಾದಿ ಮುಹಮ್ಮದ್ (ಸ)’ ವಿಷಯದ ಕುರಿತು ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿದೆ. ವಿಜೇತರಿಗೆ ಕ್ರಮವಾಗಿ 5,000 ರೂ., 3,000 ರೂ. ಮತ್ತು 2,000 ರೂ. ಬಹುಮಾನ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಪ್ರವಾದಿ ಮುಹಮ್ಮದ್ (ಸ) ಅವರ ಕುರಿತು ಸಮಾಜದಲ್ಲಿ ಇರುವ ತಪ್ಪು ಕಲ್ಪನೆಗಳನ್ನು ನಿವಾರಿಸಿ, ಸೌಹಾರ್ದತೆ ಮತ್ತು ಪರಸ್ಪರ ಬಾಂಧವ್ಯವನ್ನು ಬೆಳೆಸುವುದು ಈ ಸೀರತ್ ಅಭಿಯಾನದ ಪ್ರಮುಖ ಉದ್ದೇಶವಾಗಿದೆ ಎಂದು ಆಸಿಫುದ್ದೀನ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor