ಬೀದರ್: ಬಸವಾದಿ ಶಿವಶರಣರ ಹೆಸರಿನಲ್ಲಿ ಆಯೋಜಿಸಲಾಗಿರುವ ಹಿಂದೂ ಸಮಾವೇಶವನ್ನು ವಿರೋಧಿಸಿ ಸೆ.25ರಂದು ಕಲಬುರಗಿಯಲ್ಲಿ ನಡೆಯಲಿರುವ ಪ್ರತಿಭಟನೆಗೆ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಬೆಂಬಲ ವ್ಯಕ್ತಪಡಿಸಿದೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಒಕ್ಕೂಟ, ನಾಡಿನ ಪ್ರಗತಿಪರ ಚಿಂತಕರು ಹಾಗೂ ವಿವಿಧ ತಳ ಸಮುದಾಯಗಳ ಜನರು ನಡೆಸುತ್ತಿರುವ ಪ್ರತಿಭಟನೆ ಯಾವುದೇ ದುರುದ್ದೇಶದಿಂದ ಅಲ್ಲ, ಅದು ಸಾಂಸ್ಕೃತಿಕ ಹಿನ್ನೆಲೆಯ ಹೋರಾಟವಾಗಿದೆ ಎಂದು ತಿಳಿಸಿದೆ.

ಬಸವಾದಿ ಶಿವಶರಣರು ಸಮಸಮಾಜದ ಕನಸು ಕಂಡವರು. ಮೇಲು-ಕೀಳು, ಬಡವ-ಬಲ್ಲಿದ ಎಂಬ ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನು ವಿರೋಧಿಸಿ ಸಮಾನತೆಯ ಸಂದೇಶ ಸಾರಿದವರು. ಕಾಯಕ, ದಾಸೋಹ ಮತ್ತು ಸಮಾನತೆಯ ತತ್ವಗಳನ್ನು ಪ್ರತಿಪಾದಿಸಿದ ಅವರ ತ್ಯಾಗ ಹಾಗೂ ಬಲಿದಾನಗಳನ್ನು ಮರೆಯಲು ಸಾಧ್ಯವಿಲ್ಲ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ಬಸವಾದಿ ಶಿವಶರಣರ ಮೂಲ ಆಶಯಗಳಿಗೆ ಧಕ್ಕೆ ತರುವ ಯಾವುದೇ ಕಾರ್ಯವನ್ನು ನೈತಿಕ ಹಾಗೂ ಸಂವಿಧಾನಾತ್ಮಕ ನೆಲೆಯಲ್ಲಿ ವಿರೋಧಿಸಬೇಕಿದೆ ಎಂದು ಒಕ್ಕೂಟ ಹೇಳಿದೆ.

ರಾಜ್ಯ ಸರ್ಕಾರ ಹಾಗೂ ಆಡಳಿತಾತ್ಮಕ ಮುಖ್ಯಸ್ಥರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ ಶಾಂತಿ ಮತ್ತು ಸೌಹಾರ್ದ ವಾತಾವರಣ ಕಾಪಾಡುವಂತೆ ಒತ್ತಾಯಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor