ಬೀದರ್ | ಬಾಲಕನಿಗೆ ಬೈಕ್ ನೀಡಿದವನಿಗೆ 25 ಸಾವಿರ ರೂ. ದಂಡ ವಿಧಿಸಿದ ನ್ಯಾಯಾಲಯ
ಹುಮನಾಬಾದ್ : ಲೈಸೆನ್ಸ್ ಇಲ್ಲದ ಬಾಲಕನಿಗೆ ಬೈಕ್ ನೀಡಿದ ಮಾಲಕನಿಗೆ 25 ಸಾವಿರ ರೂ. ದಂಡ ವಿಧಿಸಿ ಹುಮನಾಬಾದ್ ಹೆಚ್ಚುವರಿ ಜೆ.ಎಂ.ಎಫ್.ಸಿ. ನ್ಯಾಯಾಲಯ ಆದೇಶ ಹೊರಡಿಸಿದೆ.
2023 ಜುಲೈ ತಿಂಗಳಲ್ಲಿ ಚಿಟಗುಪ್ಪ ನೀರಿನ ಟ್ಯಾಂಕ್ ಹತ್ತಿರ ಬಸ್ ಮತ್ತು ಬೈಕ್ ನಡುವೆ ಅಪಘಾತವಾಗಿ ಬಾಲಕನಿಗೆ ಗಾಯವಾಗಿತ್ತು. ಕೃಷ್ಣ ಎಂಬಾತನು ಲೈಸೆನ್ಸ್ ಇಲ್ಲದ ಬಾಲಕನಿಗೆ ಬೈಕ್ ಚಲಾಯಿಸಲು ನೀಡಿದ್ದನು. ಈ ಕುರಿತು ಚಿಟಗುಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಲಾಗಿತ್ತು.
ಈ ಪ್ರಕರಣದ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯ ಮೋಟಾರ್ ಸೈಕಲ್ ಮಾಲಕನಾದ ಆರೋಪಿ ಕೃಷ್ಣ ಎಂಬಾತನಿಗೆ 25 ಸಾವಿರ ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ.