ಬೀದರ್: ಕರ್ನಾಟಕದ ಸಾಂಸ್ಕೃತಿಕ ನಾಯಕ, ಜಗಜ್ಯೋತಿ ಬಸವಣ್ಣನವರ ಕುರಿತು ‘ಬಸವ ಮಂಟಪ’ ಕೃತಿಯಲ್ಲಿ ಅವಹೇಳನಕಾರಿ ಉಲ್ಲೇಖ ಮಾಡಿರುವುದು ಖಂಡನೀಯ ಎಂದು ನರಸಪ್ಪ ಹನುಮಂತಪ್ಪ ಪಟವಾರಿ ಟ್ರಸ್ಟ್‌ನ ಅಧ್ಯಕ್ಷ ಚಂದ್ರಶೇಖರ್ ಎನ್. ಪಟವಾರಿ ಪ್ರಕಟಣೆ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರವಿ ಹಂಜ್ ಅವರು ತಮ್ಮ ಕೃತಿಯಲ್ಲಿ ಬಸವಣ್ಣನವರು ಬಿಜ್ಜಳನ ಭಂಡಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಉಲ್ಲೇಖಿಸಿರುವುದು ಖಂಡನೀಯವಾಗಿದೆ. ಬಸವಣ್ಣನವರ ‘ಛಲಬೇಕು ಶರಣಂಗೆ ಪರಧನವನೊಲ್ಲೆಂಬ’ ಎಂಬ ವಚನವೇ ಇಂತಹ ಆರೋಪಗಳಿಗೆ ಉತ್ತರ ನೀಡುತ್ತದೆ. ಬಸವಣ್ಣನವರು 12ನೇ ಶತಮಾನದಲ್ಲಿ 770 ಅಮರ ಗಣಗಳ ನೇತೃತ್ವದಲ್ಲಿ ಕಾಯಕ ಕ್ರಾಂತಿ ನಡೆಸಿ, ಕಾಯಕದಿಂದ ಗಳಿಸಿದ ಸಂಪತ್ತಿನ ಮೂಲಕ ದಾಸೋಹ ವ್ಯವಸ್ಥೆಯನ್ನು ರೂಪಿಸಿದ ಮಹಾನ್ ಸಾಮಾಜಿಕ ಸುಧಾರಕರಾಗಿದ್ದರು ಎಂದು ಅವರು ಹೇಳಿದ್ದಾರೆ.

ಬಸವಣ್ಣನವರ ಕ್ರಾಂತಿಯ ಪ್ರಮುಖ ಆಶಯಗಳಾದ ಕಾಯಕದ ಉದಾರೀಕರಣ, ಜಾತಿಭೇದ ನಿರ್ಮೂಲನೆ ಹಾಗೂ ಅಂಗಭೇದವಿಲ್ಲದ ಸಮಾನತೆಯ ತತ್ವಗಳು ಸಮಾಜಕ್ಕೆ ಮಹತ್ತರ ಕೊಡುಗೆ ನೀಡಿವೆ. ಇಂತಹ ಮಹಾನ್ ವ್ಯಕ್ತಿತ್ವವನ್ನು ಅಲ್ಪಜ್ಞಾನದಿಂದ ಅವಮಾನಿಸಿರುವುದು ಬಸವಣ್ಣನವರಿಗೆ ಮಾತ್ರವಲ್ಲದೆ, 770 ಅಮರ ಗಣಗಳು, ಶರಣ ಸಮುದಾಯ, ಲಿಂಗಾಯತರು ಹಾಗೂ ಬಹುಜನ ಸಮಾಜಕ್ಕೆ ಮಾಡಿದ ಅವಮಾನವಾಗಿದೆ ಎಂದು ಚಂದ್ರಶೇಖರ್ ಪಟವಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor